ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮೂರು ಕೃಷಿ ಕಾನೂನು ಸಂಬಂಧ ರೈತರು(Farmers) ವರ್ಷಕಾಲ ನಡೆಸಿದ ಬೃಹತ್ ಪ್ರತಿಭಟನೆ ಸಂಬಂಧ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್(kangana ranaut) ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಸೃಷ್ಟಿಯಾದ ಅರಾಜಕತೆ ರೀತಿಯಲ್ಲಿ ದೇಶದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆಯೂ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದಿದ್ದಾರೆ. ಅಲ್ಲದೇ ಈ ವೇಳೆ ಹೆಣಗಳು ನೇತಾಡಿವೆ. ಅತ್ಯಾಚಾರಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಿಜೆಪಿಯೇ ತಮ್ಮ ಪಕ್ಷದ ಸಂಸದೆಯ ವಿರುದ್ಧ ವಾಗ್ದಾಳಿ ನಡೆಸಿದೆ. ಈ ರೀತಿಯ ಹೇಳಿಕೆಗಳನ್ನು ಸಹಿಸುವುದಿಲ್ಲ. ಇದು ಪಕ್ಷದ ಅಭಿಪ್ರಾಯವಲ್ಲ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಸೋಮವಾರ ಸಂಜೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ(BJP), ಪಕ್ಷದ ಮತ್ತು ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡುವ ಅಧಿಕಾರವಿಲ್ಲ. ಸಬ್ಕಾ ವಿಕಾಸ್ ಮತ್ತು ಸಬ್ಕಾ ಪ್ರಯಾಸ್ ಎನ್ನುವ ಸಾಮಾಜಿಕ ಸಾಮರಸ್ಯ ಅನುಸರಿಸುತ್ತದೆ ಎಂದು ಹೇಳುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗೆ ಚಂಡೀಗಢದ ವಿಮಾನ ನಿಲ್ದಾಣದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ರೈತ ವಿರೋಧಿ ಹೇಳಿಕೆ ಸಂಬಂಧ ಕಪಾಳಕ್ಕೆ ಹೊಡೆದ ಘಟನೆ ಸಹ ನಡೆದಿದೆ.