Ad imageAd image

ಕಾಲ್ತುಳಿತ ಪ್ರಕರಣ, ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

Nagesh Talawar
ಕಾಲ್ತುಳಿತ ಪ್ರಕರಣ, ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಆರ್ ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದೆ. ನಗರದ ಫ್ರೀಡಂ ಪಾರ್ಕ್ ಹತ್ತಿರ ಸೇರಿರುವ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದು, ಬಿಜೆಪಿ ರಾಜ್ಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೆಲುವಿನ ಸಂಭ್ರಮಾಚರಣೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂಬ ಮಾಹಿತಿ ಇದ್ದರೂ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಆಯೋಜಿಸಿ ಭದ್ರತೆ ನೀಡಲಾಗದೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪ್ರಚಾರದ ಗೀಳಿಗೆ ಅಮಾಯಕರ ಬಲಿ ಪಡೆದ ಸರ್ಕಾರದ ಜನಕಂಠಕ ನಿಲುವನ್ನು ಖಂಡಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಸಿ.ಎನ್ ಅಶ್ವತ್ಥನಾರಾಯಣ ಸೇರಿ ಹಲವು ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೂನ್ 4ನೇ ತಾರೀಕು ರಾಜ್ಯಾದ್ಯಂತ, ದೇಶಾದ್ಯಂತ ಆರ್ ಸಿಬಿ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಪೈಪೋಟಿ ನಡೆಯುತ್ತಿತ್ತು. ಆರ್ ಸಿಬಿ ಗೆಲುವಿನ ಸಂಭ್ರಮವನ್ನು ನಮ್ಮ ಸರ್ಕಾರದ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಎಂಬ ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುವ ಹಠ ಹಾಗೂ ಚಟಕ್ಕೆ ಬಿದ್ದು ಉಪಮುಖ್ಯಮಂತ್ರಿಗಳಂತೂ ಏರ್ಪೋರ್ಟ್ ಗೆ ದಾವಿಸಿ ಕ್ರೀಡಾಪಟುಗಳನ್ನು ಸ್ವಾಗತಿಸಿ ಕ್ರೀಡಾಂಗಣದಲ್ಲಿ ಕಪ್ ಎತ್ತಿ ಹಿಡಿದು ತಾವೇ ಗೆದ್ದವರಂತೆ ಬಿಂಬಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ವರದಿ ಕೊಟ್ಟರೂ ಸಹ ಲೆಕ್ಕಿಸದೇ ಪುಕ್ಕಟ್ಟೆ ಪ್ರಚಾರದ ಗೀಳಿಗೆ ಬಿದ್ದು ಎರಡೂ ಕಡೆ ಕಾರ್ಯಕ್ರಮ ನಡೆಸಿದರ ಪರಿಣಾಮವಾಗಿ 11 ಮುಗ್ಧ ಜೀವಗಳ ಬಲಿ ತೆಗೆದುಕೊಂಡರು. ಈಗಲಾದರೂ ಭಂಡತನ ಬಿಟ್ಟು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

WhatsApp Group Join Now
Telegram Group Join Now
Share This Article