ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆಯಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿ ವತಿಯಿಂದ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸುವ ಮೂಲಕ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ, ಗ್ಯಾರೆಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಜಿಲ್ಲೆಯ ನಾಗಠಾಣ, ಸಿಂದಗಿ ಸೇರಿ ಬೇರೆ ಬೇರೆ ಭಾಗದಲ್ಲಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗುವ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.