ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆರ್ ಸಿಬಿ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವ ಪ್ರಕರಣ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ಹತ್ತಿರ ಪ್ರತಿಭಟನೆ ನಡೆಸಿರುವ ಬಿಜೆಪಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದೇನಲ್ಲ. ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಬಿಜೆಪಿಯ ರಕ್ತದಲ್ಲಿಯೇ ಇದೆ. 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದಲ್ಲಿ ಅಂದಾಜು 2 ಸಾವಿರ ಜನರು ಪ್ರಾಣ ಕಳೆದುಕೊಂಡರು. ಅವರದೆ ಪಕ್ಷದ ಪ್ರಧಾನಿ ವಾಜಪೇಯಿ ಸೂಚನೆ ನೀಡಿದರೂ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜೀನಾಮೆ ನೀಡಲಿಲ್ಲ. ಮೋರ್ಬಿ ಸೇತುವೆ ಕುಸಿದು ಬಿದ್ದು 140 ಜನರು ಗುಜರಾತಿನಲ್ಲಿ ಮೃತಪಟ್ಟರು. ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ 30 ಯಾತ್ರಿಕಯರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿರುವವರು ಬಿಜೆಪಿಯವರು ಅಲ್ಲವೇ? ಇವರು ರಾಜೀನಾಮೆ ನೀಡುವುದು ಬಿಡಿ. ಸರಿಯಾದ ತನಿಖೆ ಮಾಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ಅನೇಕ ಕಡೆ ಸಂಭವಿಸಿದ ಕಾಲ್ತುಳಿತ ಪ್ರಕರಣಗಳಲ್ಲಿ ನೂರಾರು ಜನರು ಸತ್ತರು. ಇದಕ್ಕೆಲ್ಲ ಯಾರು ಹೊಣೆ? ಇವರು ಇರುವುದೆ ಹೆಣದ ಮೇಲೆ ರಾಜಕೀಯ ಮಾಡಲು. ನಾನು ಎರಡು ದಿನಗಳ ಹಿಂದೆ ಅಹಮದಾಬಾದ್ ಗೆ ಹೋಗಿದ್ದೆ. ಘಟನೆ ಬಗ್ಗೆ ನಾನು ಕೇಂದ್ರ ಸರ್ಕಾರ ಗುರಿ ಮಾಡಿ ಮಾತನಾಡಿದ್ದೇನೆಯೇ ಎಂದು ಉಪ ಮುಖ್ಯಂತ್ರಿ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಯಾರಿಗೆ ಶಿಕ್ಷೆ ಕೊಡಬೇಕೋ ಅದನ್ನು ಸರ್ಕಾರ ಮಾಡಿದೆ. ತನಿಖೆ ಸಲುವಾಗಿ ಏಕಸದಸ್ಯ ಆಯೋಗ ರಚನೆ ಮಾಡಲಾಗಿದೆ. ಕಾಂಗ್ರೆಸ್ ಎಂದಿಗೂ ಹೆಣದ ಮೇಲೆ ರಾಜಕಾರಣ ಮಾಡಿಲ್ಲ. ನಮ್ಮನ್ನು ಟೀಕೆ ಮಾಡುತ್ತಿರುವ ಬಿಜೆಪಿಯವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡೋಣ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.