ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಾಂಗ್ರೆಸ್ ನಾಯಕ ಮಾಲೀಕಯ್ಯ ಗುತ್ತೇದಾರಗೆ ಬ್ಲ್ಯಾಕ್ ಮೇಲ್(Extort) ಮಾಡುತ್ತಿದ್ದ ದಂಪತಿಯನ್ನು ಸಿಲಿಕಾನ್ ಸಿಟಿಯಲ್ಲಿನ ಗರುಡಾ ಮಾಲ್ ಹತ್ತಿರ ಸಿಸಿಬಿ(CCB Police) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲೆಯ ಮಹಮೊದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾದ ಮಂಜುಳಾ ಪಾಟೀಲ ಹಾಗೂ ಈಕೆ ಪತಿ ಶಿವರಾಜ್ ಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದ ಕಾರಣಕ್ಕೆ ಮಾಲೀಕಯ್ಯ ಗುತ್ತೇದಾರ ಪರಿಚಯವಿತ್ತು. ಅವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದಳು.
ವಿಡಿಯೋ ಕಾಲ್ ನಲ್ಲಿ ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಂಡಿದ್ದ ಈಕೆ 20 ಲಕ್ಷ ರೂಪಾಯಿಗೆ ಬ್ಲ್ಯಾಕ್ ಮೇಲ್(Black Mail) ಮಾಡುತ್ತಿದ್ದಳಂತೆ. ಅಕ್ಟೋಬರ್ 23, 24ರಂದು ವಾಟ್ಸಪ್ ನಲ್ಲಿ ಪದೆಪದೆ ಕಾಲ್ ಮಾಡಿ ಆಡಿಯೋ, ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾಳಂತೆ. ಅಲ್ಲದೇ ಬೆಂಗಳೂರಲ್ಲಿ ಮಾಲೀಕಯ್ಯ ಗುತ್ತೇದಾರ ಪುತ್ರ ರಿತೀಶ್ ನನ್ನು ಭೇಟಿಯಾಗಿ ಹಣಕ್ಕೆ ಬೇಡಿಕೆ ಇಟ್ಟದ್ದಳು. ಗರುಡಾ ಮಾಲ್ ಬಳಿ ಬಂದು ಹಣ ನೀಡಲು ಹೇಳಿದ್ದಳು. ಈ ಸಂಬಂಧ ರಿತೀಶ್ ಶುಕ್ರವಾರ ದೂರು ಸಲ್ಲಿಸಿದ್ದರು. ಶನಿವಾರ ಇವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿ 8 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.