ಪ್ರಜಾಸ್ತ್ರ ಸುದ್ದಿ(ನೋಡುಗರ ಮೇಲೆ ಪರಿಣಾಮ ಬೀರುವ ಹಿನ್ನಲೆ ವಿಡಿಯೋ ತೋರಿಸಿಲ್ಲ)
ವಿಜಯಪುರ(Vijayapura): ಇಟ್ಟಿಗೆ ಭಟ್ಟಿ ಕಾರ್ಮಿರ ಮೇಲೆ ಮಾಲೀಕ ಹಾಗೂ ಆತನ ಮಗ ಸೇರಿದಂತೆ ಹಲವರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗಾಂಧಿ ನಗರದ ಸ್ಟಾರ್ ಚೌಕ್ ಹತ್ತಿರ ಇರುವ ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರ ಮೇಲೆ ಕಳೆದ ಮೂರು ದಿನಗಳಿಂದ ಹಲ್ಲೆ ಮಾಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇದನ್ನು ನೋಡಬೇಕಿದೆ.
ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದ ಸದಾಶಿವ ಬಸಪ್ಪ ಮಾದರ, ಉಮೇಶ ಬಾಳಪ್ಪ ಮಾದರ ಹಾಗೂ ಸದಾಶಿವ ಚಂದ್ರಪ್ಪ ಬಬಲಾದಿ ಎಂಬುವರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ, ಆತನ ಮಗ ಸೇರಿದಂತೆ ಹಲವರು ದಾರುಣವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಇವರು ಊರಿಗೆ ಹೋಗಿದ್ದರು. ಅಡ್ವಾನ್ಸ್ ಹಣ ಪಡೆದು ತಡವಾಗಿ ಬಂದಿದ್ದಾರೆ ಎಂದು ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಡಿಯೋ ನೋಡಿದರೆ ಇವರೆಲ್ಲ ರಾಕ್ಷಸರು ಎಂದು ಸಾರ್ವಜಿಕರು ಕಿಡಿ ಕಾರುತ್ತಿದ್ದು, ಸೂಕ್ತ ಕಾನೂನು ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ.