ಪ್ರಜಾಸ್ತ್ರ ಸುದ್ದಿ
ಬೀದರ(Bidara): ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಕೈಗೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ(BUDA) ಆಯುಕ್ತ ಸೇರಿದಂತೆ ಮೂವರು ಸಿಕ್ಕಿಬಿದ್ದಿದ್ದಾರೆ. ಎನ್ಎ(NA Site) ನಿವೇಶನ ಮಾರಾಟದ ಅನುಮತಿಗಾಗಿ 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಶುಕ್ರವಾರ ಸಿಕ್ಕಿಬಿದ್ದಿದ್ದಾರೆ.
ಬುಡಾ ಆಯುಕ್ತ ಶ್ರೀಧರ ಚಿಕಕೋಡೆ, ಸದಸ್ಯ ಚಂದ್ರಕಾಂತ್ ರೆಡ್ಡಿ ಹಾಗೂ ಇವರ ಆಪ್ತ ಸಿದ್ದು ಹೂಗಾರ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಚಿಕ್ಕಪೇಟೆಯಲ್ಲಿ ಸರ್ವೇ ನಂಬರ್ 26ರ ಕೃಷಿಯೇತರ ಭೂಮಿಯ ಶೇಕಡ 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ ಅವುಗಳ ಮಾರಾಟಕ್ಕೆ ಅನುಮತಿ ಸಲುವಾಗಿ ಆಯುಕ್ತ ಶ್ರೀಧರ್ ಹಾಗೂ ಸದಸ್ಯ ಚಂದ್ರಕಾಂತ್ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದರ ಮುಂಗಡವಾಗಿ 10 ಲಕ್ಷ ರೂಪಾಯಿ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.