ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಲಂಚ ಹಾಗೂ ವಂಚನೆ ಪ್ರಕರಣ ಸಂಬಂಧ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದಾನಿ ರಕ್ಷಣೆಗೆ ಕೇಂದ್ರ ಸರ್ಕಾರ ನಿಂತಿದೆ. ಸಣ್ಣ ಸಣ್ಣ ಪ್ರಕರಣಗಳಲ್ಲಿ ದೇಶದ ಜನರನ್ನು ಬಂಧಿಸುತ್ತಿರುವಾಗ ಅದಾನಿಯನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು. ತಮ್ಮ ಮೇಲಿನ ಆರೋಪಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ. ನಿಸ್ಸಂಶಯವಾಗಿ ನಿರಾಕರಿಸುತ್ತಾರೆ. ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸಿದ್ದರೆ ಯಾವ ಜಗತ್ತಿನಲ್ಲಿದ್ದೀರಿ ಎಂದು ಮರು ಪ್ರಶ್ನಿಸಿದರು.
ಭಾರತದಲ್ಲಿ ಹೂಡಿಕೆ ಸಂಬಂಧ ವಿದೇಶಿ ಕಂಪನಿಗಳಿಗೆ ವಂಚನೆ, ಭಾರತದಲ್ಲಿ ಅಧಿಕಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಿದ ಆರೋಪ ಎದುರಿಸುತ್ತಿದ್ದು, ಅಮೆರಿಕದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿದೆ. ಇದರಲ್ಲಿ ಗೌತಮ್ ಅದಾನಿ ಅಣ್ಣನ ಮಗ ಸಾಗರ ಹೆಸರು ಸಹ ಕೇಳಿ ಬಂದಿದೆ.