ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಅಂಬಿ ಅಪಹರಿಸಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮಂಜುಳಾ ರಾಮನಗಟ್ಟಿ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಈಕೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಈಕೆ ವಿರುದ್ಧ ನೌಕರಿ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿರುವುದು ತಿಳಿದು ಬಂದಿದೆ.ki
ಕಳೆದ ಫೆಬ್ರವರಿ 15ರಂದು ಬಸವರಾಜ್ ಅಂಬಿ ತಮ್ಮ ಹೊಲದಿಂದ ವಾಪಸ್ ಆಗುತ್ತಿದ್ದರು. ಆಗ ಅವರನ್ನು ಕಿಡ್ನಾಪ್ ಮಾಡಲಾಗಿದೆ. ನಂತರ ಪತ್ನಿಗೆ ಫೋನ್ ಮಾಡಿ 5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಬಸವರಾಜ್ ಪುತ್ರ ಹುಲಿರಾಜ್ ನಿಪ್ಪಾಣಿಯಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಲಕ್ಷ ರೂಪಾಯಿ ನೀಡಲು ಹೋಗಿದ್ದರು. ಆದರೆ, ಅಪಹರಣಾಕಾರರು ಬಂದಿರಲಿಲ್ಲ ಹಾಗೂ ಬಸವರಾಜನನ್ನು ಬಿಡುಗಡೆ ಮಾಡಿರಲಿಲ್ಲ. ಹಣ ಕೊಡಲು ಅಷ್ಟೊಂದು ಜನರು ಯಾಕೆ ಬಂದಿದ್ದೀರಿ ಎಂದು ಪತ್ನಿ ಶೋಭಾಗೆ ಪ್ರಶ್ನಿಸಿದ್ದಳಂತೆ.
ಮತ್ತೊಮ್ಮೆ 8 ಚೀಲಗಳಲ್ಲಿ ಹಣ ತುಂಬಿಸಿಕೊಂಡು ಅವರು ಹೇಳಿದ ಜಾಗಕ್ಕೆ ಹೋಗಿದ್ದಾರೆ. ಆಗಲೂ ಅಪಹರಣಾಕಾರರು ಬಂದಿಲ್ಲ. ಇದರಿಂದ ಆತಂಕಗೊಂಡ ಶೋಭಾ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಾಲ್ವರನ್ನು ಮೊದಲು ಬಂಧಿಸಲಾಗಿದೆ. ಶನಿವಾರ ಮೂವರನ್ನು ಬಂಧಿಸಿ ಭಾನುವಾರ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪ್ರಕರಣದ ಕಿಂಗ್ ಪಿನ್ ಮಂಜುಳಾಳನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.