ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್(28) ಕೊಲೆ ಪ್ರಕರಣ ಸಂಬಂಧ ಪತ್ನಿ ಯಶಸ್ವಿನಿ(21), ಅತ್ತೆ ಹೇಮಾಬಾಯಿ(37) ಎಂಬುವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ತಾಲೂಕಿನ ಕುದೂರು ನಿವಾಸಿ ಲೋಕನಾಥ್ ಸಿಂಗ್ ನನ್ನು ಬಿಜಿಎಸ್ ಲೇಔಟ್ ಹತ್ತಿರದ ನಿರ್ಮಾಣದ ಹಂತದ ಕಟ್ಟಡದ ಬಳಿ ಹತ್ಯೆ ಮಾಡಲಾಗಿತ್ತು. ಲೋಕನಾಥ್ ಸಹೋದರ ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಲೋಕನಾಥ್ ತಂದೆ, ತಾಯಿ ಮೃತಪಟ್ಟಿದ್ದು ಅಣ್ಣ ತಮ್ಮಿಂದರು ಬ್ಯುಸಿನೆಸ್ ಮಾಡಿಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಲೋಕನಾಥ್ ಸಹೋದರನ ಮದುವೆ ಮಾಡಿದ್ದ. ಆ ಸಂದರ್ಭದಲ್ಲಿ ಸಂಬಂಧಿಯೊಬ್ಬರು ಹೇಮಾಬಾಯಿಯನ್ನು ಪರಿಚಯಿಸಿ ಇವರು ನಿಮ್ಮ ಅತ್ತೆಯಾಗಬೇಕು ಎಂದಿದ್ದರು. ಈ ವೇಳೆ ಯಶಸ್ವಿನಿ ಪರಿಚಯ ಸಹ ಆಗಿದೆ. ಮುಂದೆ ಇಬ್ಬರ ನಡುವೆ ಫೋನ್ ನಂಬರ್ ಬದಲಾವಣೆಯಾಗಿದೆ. ಕಳೆದ ಡಿಸೆಂಬರ್ ನಲ್ಲಿ ಲೋಕನಾಥ್ ಕುಣಿಗಲ್ ರಿಜಿಸ್ಟರ್ ಕಚೇರಿಗೆ ಕರೆದುಕೊಂಡು ಹೋಗಿ ಯಶಸ್ವಿನಿಯನ್ನು ಮದುವೆಯಾಗಿದ್ದಾನೆ. ಕೆಲವು ದಿನಗಳ ಕಾಲ ಒಟ್ಟಿಗೆ ಸಂಸಾರ ಮಾಡಿದ್ದಾರೆ. ಮುಂದೆ ಆಕೆಯನ್ನು ತವರು ಮನೆಗೆ ಕಳಿಸಿದ್ದಾನಂತೆ.
ಲೋಕನಾಥ್ ಮತ್ತೊಬ್ಬಳೊಂದಿಗೆ ಒಡಾಟ ನಡೆಸುತ್ತಿರುವುದು ಯಶಸ್ವಿನಿ ಹಾಗೂ ಅತ್ತೆ ಹೇಮಾಬಾಯಿಗೆ ತಿಳಿದಿದೆ. ಹೀಗಾಗಿ ಇವರ ಸಂಬಂಧ ಡಿವೋರ್ಸ್ ತನಕ ಬಂದಿದೆ. ಆಗ ಅವರಿಗೆ ಲೋಕನಾಥ್ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಇವರು ಕೊಲೆಗೆ ಸಂಚು ರೂಪಿಸಿದ್ದಾರೆ. ಇದೇ ಮಾರ್ಚ್ 23ರಂದು ಲೋಕನಾಥನನ್ನು ಕರೆಯಿಸಿಕೊಂಡಿದ್ದಾರೆ. ಮನೆಯಿಂದ ಮಾಡಿಕೊಂಡು ಬಂದಿದ್ದ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಾರೆ. ಅದನ್ನು ಲೋಕನಾಥಗೆ ನಿಂತಿಸಿದ್ದಳು. ಕಾರನ್ನು ಆಟೋದಲ್ಲಿ ಹಿಂಬಾಲಿಸಿದ ಅತ್ತೆ, ದಿಢೀರ್ ಎಂದು ಚಾಕುವಿನಿಂದ ಲೋಕನಾಥ್ ಮೇಲೆ ಹಲ್ಲೆ ಮಾಡಿದ್ದಾಳೆ. ಕುತ್ತಿಗೆಗೆ ಚಾಕು ಇರಿದಿದ್ದಾಳೆ. ನಂತರ ಪತ್ನಿ ಯಶಸ್ವಿನಿ ಸಹ ಚಾಕುವಿನಿಂದ ಇರಿದಿದ್ದಾಳೆ ಎಂದು ತಿಳಿದು ಬಂದಿದೆ. ಇದೀಗ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.