ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಆರ್ ಸಿಬಿ ಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಇಡೀ ರಾಜ್ಯಾದ್ಯಂತ ಸಂಭ್ರಮ ನಡೆಯುತ್ತಿದ್ದರೆ, ಜೂನ್ 4ರಂದು ಬೆಂಗಳೂರಲ್ಲಿ ಇಬ್ಬರು ದಿಗ್ಗಜರ ನಡುವೆ ಒಂದು ಪೈಪೋಟಿ. ಮುಖ್ಯಮಂತ್ರಿಗಳು ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದರೆ, ಉಪ ಮುಖ್ಯಮಂತ್ರಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಗ್ಯಾರೆಂಟಿ ಯೋಜನೆಯಿಂದ ಸರ್ಕಾರಕ್ಕೆ ಭಾರಿ ಜನಪ್ರಿಯತೆ ಬಂದಿದೆ. ಆರ್ ಸಿಬಿ ವಿಜಯೋತ್ಸವದ ಮೂಲಕ ಪುಕ್ಕಟೆಯಾಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳೋಣ ಎಂದು ಪೈಪೋಟಿ ನಡೆಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದ ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಸಿಎ, ಆರ್ ಸಿಬಿ ಅವರು ವಿಜಯೋತ್ಸವ ಆಚರಿಸಲು ಪೊಲೀಸ್ ಠಾಣೆಗೆ ಮನವಿ ಸಲ್ಲಿಸುತ್ತಾರೆ. ಇಷ್ಟೊಂದು ಆತುರವಾಗಿ ನಡೆಸಲು ಸಾಧ್ಯವಿಲ್ಲವೆಂದು ಅವರು ನಿರಾಕರಿಸುತ್ತಾರೆ. ಆದರೆ, ಸಿಎಂ ಅವರ ಮುಖ್ಯ ಕಾರ್ಯದರ್ಶಿಗಳು ಅಧಿಕಾರಿಗಳ ಸಭೆ ಮಾಡಿ ವಿಧಾನಸೌಧ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡುವ ಕುರಿತು ಹೇಳುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆಯಿದ್ದು, ಭದ್ರತೆ ದೃಷ್ಟಿಯಿಂದ ತೊಂದರೆಯಾಗುತ್ತೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ಯಾವುದನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳದೆ ಪುಕ್ಕಟೆ ಪ್ರಚಾರ ತೆಗೆದುಕೊಳ್ಳಲು ಇದಕ್ಕೆ ಅನುಮತಿ ಕೊಡುತ್ತಾರೆ ಎಂದು ಕಿಡಿ ಕಾರಿದರು.
ಈ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡುವ ಸಲುವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ದುರ್ಘಟನೆಯಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರು ಎ1, ಎ2, ಎ3 ಆರೋಪಿಗಳು. ಆದರೆ, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿದ್ದಾರೆ. ಸರ್ಕಾರ ಕಿತ್ತು ಹಾಕಲು ಜೂನ್ 13ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಜೂನ್ 16ರಂದು ತಾಲೂಕು ಕೇಂದ್ರಗಳಲ್ಲಿಯೂ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಉಪಸ್ಥಿತರಿದ್ದರು.