ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಾಕಷ್ಟು ರಾಜಕೀಯ ವಾಗ್ದಾಳಿಗಳಿಗೆ ಕಾರಣವಾಗಿರುವ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ವಿಚಾರ ಇದೀಗ ಸರ್ಕಾರ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಮನಗರ(Ramanagara) ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕಾರಣ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಹೆಚ್.ಕೆ ಪಾಟೀಲ(HK Patil) ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಹೆಸರು ಬದಲಾವಣೆ ಮಾಡುವ ಸಂಬಂಧ ಸಾರ್ವಜನಿಕರು, ಜನಪ್ರತಿನಿಧಿಗಳಿಂದಲೂ ಒತ್ತಡವಿತ್ತು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶವಿಲ್ಲ. ಹೆಸರು ಬದಲಾವಣೆ ಸಂಬಂಧ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು. ಇನ್ಮುಂದೆ ಬ್ರ್ಯಾಂಡ್ ಬೆಂಗಳೂರಿನ(Brand Bengaloru) ಎಲ್ಲ ಸೌಲಭ್ಯಗಳು ಸ್ಥಳೀಯ ಜನರಿಗೆ ಸಿಗಲಿದೆ ಎಂದಿದ್ದಾರೆ.
ರಾಮನಗರ ಹೆಸರು ಬದಲಾವಣೆ ಸಂಬಂಧ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಖಂಡಿಸಿದ್ದಾರೆ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar), ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HD Kumaraswmay) ನಡುವೆ ಮಾತಿನ ಪ್ರಹಾರವೇ ನಡೆದು ಹೋಗಿದೆ. ತನ್ನದೆಯಾದ ಇತಿಹಾಸ ಹೊಂದಿರುವ ಜಿಲ್ಲೆಯ ಹೆಸರು ಬದಲಾವಣೆ ಮಾಡಿ, ರಿಯಲ್ ಎಸ್ಟೇಟ್ ದಂಧೆ ಶುರು ಮಾಡಲು ಮುಂದಾಗುತ್ತಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.