ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶುಕ್ರವಾರ ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನದಲ್ಲಿ ಭಾಗವಹಿಸಲು ಬರುತ್ತಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಪ್ರತಿಭಟಿಸಲು ವಿವಿಧ ಬಸವ ಸಂಘಟನೆಗಳ ಪ್ರತಿನಿಧಿಗಳು ಕರೆ ಕೊಟ್ಟಿದ್ದಾರೆ. ಜೊತೆಗೆ ಕನ್ನೇರಿ ಸ್ವಾಮಿಯನ್ನು ಬೆಂಗಳೂರಿನಿಂದ ನಿರ್ಬಂಧಿಸಲು ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಉದ್ಯಮ ಸಮ್ಮೇಳನ’ದಲ್ಲಿ ನಾಳೆ ಮಧ್ಯಾಹ್ನ 12ರಿಂದ 1 ಗಂಟೆಯವರಿಗೆ ಪಾಲ್ಗೊಳ್ಳಲು ಕನ್ನೇರಿ ಸ್ವಾಮಿಗೆ ಆಹ್ವಾನ ನೀಡಲಾಗಿದೆ. ಬಸವತತ್ವದ ವಿರುದ್ಧವಾಗಿ ನಡೆದುಕೊಳ್ಳುವ ಈ ಸ್ವಾಮೀಜಿಯನ್ನು ಕರೆದಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಬೆಂಗಳೂರಿನ ಬಸವಾಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಬಂದು ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು,” ಎಂದು ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೋಂಡಿ ಕರೆ ನೀಡಿದ್ದಾರೆ.
ಇದು ಲಿಂಗಾಯತರ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶ. ಇದರ ಮುಖ್ಯ ಪ್ರಯೋಜಕರು ‘ಬಸವೇಶ್ವರ ಹೌಸಿಂಗ್’ ಅನ್ನುವ ಕಂಪನಿ. ಇಲ್ಲಿ ಬಸವಣ್ಣನವರ ಹೆಸರು, ಲಿಂಗಾಯತ ಸಮಾಜ ಬಳಸಿಕೊಂಡು ಲಿಂಗಾಯತರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ನಿಜಗುಣಮೂರ್ತಿ ಹೇಳಿದರು. ಈ ಸಮಾವೇಶಕ್ಕೆ ಕನ್ನೇರಿ ಸ್ವಾಮೀಜಿಯನ್ನು ಕರೆಯುವ ಕಾರಣವೇನು? ಇವರು ಬಗ್ಗೆ ಲಿಂಗಾಯತ ಸಮಾಜದಲ್ಲಿ ಏನು ಅಭಿಪ್ರಾಯವಿದೆ ಎಂದು ಸಂಘಟಕರಿಗೆ ತಿಳಿದಿಲ್ಲವೇ. ಕನ್ನೇರಿ ಸ್ವಾಮೀಜಿಯ ಅಹ್ವಾನ ಹಿಂದೆ ಪಡೆದರೆ ಸಾಲದು. ಈ ಕುತಂತ್ರಕ್ಕೆ ಸಂಘಟಕರು ಕೂಡಲಸಂಗಮಕ್ಕೆ ಹೋಗಿ ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು ಎಂದು ಬೆಂಗಳೂರು ಉದ್ಯಮಿ ಶಾಂತಕುಮಾರ ಹರ್ಲಾಪುರ ಕೇಳಿದರು.
ಈ ಜಾಗತಿಕ ಉದ್ಯಮ ಸಮ್ಮೇಳನವನ್ನು ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ಎನ್ನುವ ಹೊಸ ಸಂಘಟನೆ ಆಯೋಜಿಸಿದೆ. ಬಸವ ಅನುಯಾಯಿಗಳನ್ನು ಬಸವ ತಾಲಿಬಾನ್ ಎಂದು, ಲಿಂಗಾಯತ ಸ್ವಾಮೀಜಿಗಳನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಕನ್ನೇರಿ ಸ್ವಾಮಿ ಶರಣ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಾಡಸಿದ್ದೇಶ್ವರ ಮಠ ಬಸವ ಪರಂಪರೆಯ ಮಠ ಎನ್ನುವುದನ್ನು ಮರೆತು ಲಿಂಗಾಯತ ಧರ್ಮದ ವಿರೋಧಿಗಳ ಜೊತೆ ಸ್ವಾರ್ಥಕ್ಕಾಗಿ ಕೈ ಜೋಡಿಸಿದ್ದಾರೆ, ಎಂದು ಬಸವ ಸಂಘಟನೆಗಳು ಆರೋಪಿಸಿವೆ. ಅವರ ವಿರುದ್ಧ ಪ್ರತಿಭಟನೆ ನಡೆಯಲು ಶುರುವಾಗಿದ್ದರಿಂದ ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಂದ ಅವರನ್ನು ಬಹಿಷ್ಕರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಹೈ ಕೋರ್ಟ್, ಸುಪ್ರೀಂ ಕೋರ್ಟಿಗೆ ಹೋದ ಕನ್ನೇರಿ ಸ್ವಾಮೀಜಿಗೆ ನ್ಯಾಯಾಧೀಶರು ಇದು ಸ್ವಾಮೀಜಿಗಳಿಗೆ ಯೋಗ್ಯವಾದ ನಡತೆಯಲ್ಲ ಛೀಮಾರಿ ಹಾಕಿದೆ ಎಂದು ಹೇಳಿದರು.




