ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಅಂಬೇಡ್ಕರ್ ಅವರ ಬಗ್ಗೆ ಸಂಸತ್ತಿನಲ್ಲಿ ಅಗೌರವದಿಂದ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಡಿಸೆಂಬರ್ 28ರಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದೆ. ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ರಾಜು ಆಲಗೂರ, ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ, ಡಾ.ಅಂಬೇಡ್ಕರ್ ವಿಚಾರವಾದಿಗಳ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಸಂವಿಧಾನತ್ಮಕ ಹುದ್ದೆಯಲ್ಲಿದ್ದುಕೊಂಡು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಬಿಜೆಪಿ, ಆರ್ ಎಸ್ಎಸ್ ಮನಸ್ಥಿತಿ. ಇದರಲ್ಲಿ ಸಂವಿಧಾನ ಬದಲಾವಣೆಯ ವಿಚಾರವಿದೆ. ಅಂಬೇಡ್ಕರ್ ಬಗ್ಗೆ ಮಾತನಾಡಿದರೆ ಸಮಾಜ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಎಂದು ನೋಡುವುದು ಸಹ ಆಗಿದೆ. ಸಂವಿಧಾನದ ಮೇಲಿನ ಆಕ್ರಮಣ ಖಂಡಿಸಿ ರಾಜೀನಾಮೆಗೆ ಆಗ್ರಹಿಸಿ ಬಂದ್ ಗೆ ಕರೆ ಕೊಡಲಾಗಿದೆ ಎಂದರು.
ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಸೋಮನಾಥ ಕಳ್ಳಿಮನಿ, ಚಂದ್ರಶೇಖರ್, ಎಂ.ಸಿ ಮುಲ್ಲಾ, ಮಹಾದೇವಿ ಗೋಕಾಕ, ರವಿಕುಮಾರ ಬಿರಾದಾರ, ಸಂಗಮೇಶ ಸಾಗರ ಮಾತನಾಡಿದರು. ಜಿಲ್ಲೆಯಾದ್ಯಂತ ಬಂದ್ ಆಚರಿಸಲಾಗುವುದು. ತಾಲೂಕು ಮಟ್ಟದಲ್ಲಿಯೂ ಬಂದ್ ಇರಲಿದೆ. ಅಂದು ಶಾಲಾ, ಕಾಲೇಜು, ಮಾರುಕಟ್ಟೆ, ಬಸ್ ಸಂಚಾರ ಬಂದ್ ಇರಲಿದೆ. ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ ಎಂದು ಹೇಳಿದರು.