ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಬೈಕ್ ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಸವನ ಬಾಗೇವಾಡಿ ರಸ್ತೆಯ ಸಾಲಕ್ಕಿಯವರ ಜಾಮೀನು ಹತ್ತಿರ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ನಡೆದಿದೆ. ದೇವರ ಹಿಪ್ಪರಗಿ ಪಟ್ಟಣದ ನಿವಾಸಿಗಳಾದ ಆರೀಫ್ ಹುಸೇನಸಾಬ ವಡ್ಡೊಡಗಿ(35) ಹಾಗೂ ಮೈಬೂಬಸಾಬ ಖಾದರಬಾಶ್ಯಾ ಕರ್ಜಗಿ(65) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಹೂವಿನ ಹಿಪ್ಪರಗಿ ಮಾರ್ಗವಾಗಿ ದೇವರ ಹಿಪ್ಪರಗಿಗೆ ಬೈಕ್ ಮೇಲೆ ಬರುವಾಗ ಬಸವನಬಾಗೇವಾಡಿ ಕಡೆಗೆ ಹೊರಟಿದ್ದ ಅಪರಿಚಿತ ಕಾರೊಂದು ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ತಲೆಗೆ ತೀವ್ರ ಪೆಟ್ಟಾಗಿ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ದೇವರ ಹಿಪ್ಪರಗಿ ಠಾಣೆ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತ ಸಂಬಂಧ ಮೃತ ಬೈಕ್ ಸವಾರನ ಸಹೋದರ ಪ್ರಕರಣ ದಾಖಲಿಸಿದ್ದಾರೆ.