ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ಸಾರಿಗೆ ಇಲಾಖೆಯ ನಾಲ್ಕು ಘಟಕಗಳ ನೌಕರರ ಸಂಘದಿಂದ ಆಗಸ್ಟ್ 5ರಿಂದ ಅನಿರ್ದಿಷ್ಟವಾವಧಿ ಮುಷ್ಕರ ನಡೆಸಲು ಮುಂದಾಗಿದ್ದರು. ಇದಕ್ಕೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ, ಬಹುತೇಕ ನೌಕರರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಯಾಯಿತು. ಇದಕ್ಕೆ ಗರಂ ಆದ ಹೈಕೋರ್ಟ್, ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಬಾರದು ಎಂದು ಅರ್ಜಿ ಪರ ವಕೀಲರನ್ನು ಪ್ರಶ್ನಿಸಿದರು.
ಸರ್ಕಾರದ ಜೊತೆಗಿನ ಮಾತುಕತೆ ಏನಾಗಿದೆ ಅನ್ನೋದ ತಿಳಿಸಬೇಕು. ಅತ್ಯಾವಶ್ಯಕ ಸೇವೆ ನೀಡುವ ಇಲಾಖೆಯಲ್ಲಿರುವವರು ಈ ರೀತಿಯಾಗಿ ಮುಷ್ಕರ ನಡೆಸಿರುವುದರ ವಿರುದ್ಧ ಹೈಕೋರ್ಟ್ ಕಿಡಿ ಕಾರಿತು. ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ 2013 ಕಲಂ 8ರ ಅಡಿಯಲ್ಲಿ ಯಾವುದೇ ವಾರೆಂಟ್ ಇಲ್ಲದೆ ಬಂಧಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ಧ ಪೀಠ ಹೇಳಿತು.
ಬುಧವಾರ ಮುಷ್ಕರ ಸ್ಥಗಿತವಾಗಿದೆಯೋ ಇಲ್ಲವೋ ಅನ್ನೋದರ ಕುರಿತು ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ಅಡಿಯಲ್ಲಿ ನೌಕರರ ಸಂಘಗಳ ಪದಾಧಿಕಾರಿಗಳನ್ನು ಬಂಧಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಲಾಯಿತು. ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿ ಆಗಸ್ಟ್ 7ರವರೆಗೆ ಮುಂದೂಡಲಾಯಿತು. ಹೀಗಾಗಿ ಬುಧವಾರ ಬಸ್ ರಸ್ತೆಗೆ ಇಳಿಯುತ್ತವಾ ಅಥವ ಇಲ್ಲವಾ ಅನ್ನೋ ಪ್ರಶ್ನೆ ಮೂಡಿದೆ.