ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಕ್ರೋ ಫೈನಾನ್ಸ್ ಪ್ರಕರಣದಲ್ಲಿ ರಾಜ್ಯದಲ್ಲಿ ಹಲವು ಜೀವಗಳನ್ನು ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿ, ಯಾರೂ ಆತ್ಮಹತ್ಯೆಗೆ ಮುಂದಾಗಬಾರದು. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಕಿರುಕುಳ ಕೊಡುವವರ ವಿರುದ್ಧ ದೂರು ದಾಖಲಿಸಿ ಎಂದಿದ್ದಾರೆ. ಹೀಗಿದ್ದರೂ ಸೋಮವಾರ ಒಂದೇ ದಿನದಲ್ಲಿ 6 ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಂಟೇನಹಳ್ಳಿಯ ರವಿ(50) ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಗಳವಾಡಿ ಗ್ರಾಮದಲ್ಲಿ ಶಿವನಪ್ಪ ಧರ್ಮಟ್ಟಿ(66) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಗಿರೀಶ್(26) ನೇಣು ಹಾಕಿಕೊಂಡಿದ್ದಾನೆ. ಇದೇ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ಎನ್.ಆರ್ ನರಸಿಂಹಯ್ಯ(58) ಎಂಬುವರು ಸಹ ನೇಣಿಗೆ ಶರಣಾಗಿದ್ದಾರೆ. ಇನ್ನು ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಅಡವಿ ಆಂಜನೇಯ ಬಡಾವಣೆ ನಿವಾಸಿ ಮಾಲತೇಶ್(42) ಎಂಬುವರು ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾರೆ.
ಹೀಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತಕ್ಕೆ ದಿನದಿಂದ ದಿನಕ್ಕೆ ಸಾವುಗಳು ಹೆಚ್ಚಾಗುತ್ತಿವೆ. ಸರ್ಕಾರ ಎಷ್ಟೇ ಹೇಳಿದರೂ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ಇದಕ್ಕೆ ಕಾರಣ ಸಾಕಷ್ಟಿವೆ. ವ್ಯವಸ್ಥೆ ಸರಿಯಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುವ ಮಾತುಗಳು ಬರೀ ಮಾತಿನಲ್ಲಿ. ಕೃತಿ ರೂಪಕ್ಕೆ ಬರುವುದಿಲ್ಲ. ಹೀಗಾಗಿ ರೈತರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ನೂರಾರು, ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿದವರು ದೇಶ ಆಳುತ್ತಿದ್ದಾರೆ.