ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಮಾನಸಿಕ ಖಿನ್ನತಗೆ ಒಳಗಾಗಿ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬೀಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಜಿ ಕನ್ನಡ ನಟ ಚಂದ್ರಶೇಖರ ಸಿದ್ಧಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ನಟಿ ರಕ್ಷಿತಾ ಪ್ರೇಮ್ ಸಹ ಸಂತಾಪ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ಧಿ ಜನಾಂಗಕ್ಕೆ ಸೇರಿರುವ ಚಂದ್ರಶೇಖರ ಸಿದ್ಧಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಕೆಲ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರು. ಆದರೆ, ಅಷ್ಟಾಗಿ ಹೇಳಿಕೊಳ್ಳುವ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಊರಿಗೆ ವಾಪಸ್ ಹೋಗಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಕೆಲ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದಕ್ಕೆ ಚಿಕಿತ್ಸೆ ಸಹ ಪಡೆದಿದ್ದರಂತೆ. ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಚಂದ್ರಶೇಖರ ಸಿದ್ಧಿ ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಶುಕ್ರವಾರ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ರಿಯಾಲಿಟಿ ಶೋಗಳು ಕೆಲವರಲ್ಲಿ ಹುಟ್ಟಿಸುವ ಭ್ರಮೆಯ ಬದುಕು ಅವರನ್ನೇ ಬಲಿ ಪಡೆಯುತ್ತಿರುವುದು ನಿಜಕ್ಕೂ ದುರಂತವೇ ಸರಿ.