ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಮಾತನಾಡುವುದು ಅಂದರೆ ವಿಶ್ವವಿದ್ಯಾಲಯದ ಬಗ್ಗೆ ಮಾತನಾಡಿದಂತೆ. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ವೀರಮಹಿಳೆ ಎಂದು ಚಿತ್ತಾಪುರ ತಾಲೂಕಿನ ಕರದಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಪಂಡಿತ ಜೆ.ನೆಲ್ಲಗಿ ಹೇಳಿದರು. ತಾಲೂಕು ಆಡಳಿತ ವತಿಯಿಂದ ಬಧುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಝಾನ್ಸಿ ರಾಣಿಲಕ್ಷ್ಮಿಬಾಯಿಗಿಂತ 33 ವರ್ಷ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ ವೀರನಾರಿ. ಸಣ್ಣ ಸಂಸ್ಥಾನವಾಗಿದ್ದರೂ ಸ್ವತಂತ್ರವಾಗಿ ಉಳಿಯಲು ನಡೆಸಿದ ಹೋರಾಟ ಪ್ರತಿಯೊಬ್ಬರಿಗೂ ಸ್ಪೂರ್ತಿ. ಚೆನ್ನಮ್ಮನ ಭಂಟ ಸಂಗೊಳ್ಳಿ ರಾಯಣ್ಣನ ತ್ಯಾಗ ಸಹ ನಾವು ಎಂದಿಗೂ ಮರೆಯುವಂತಿಲ್ಲ ಎಂದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ ಹಂಗರಗಿ ಸೇರಿದಂತೆ ಇತರರು ಕಿತ್ತೂರು ರಾಣಿ ಚೆನ್ನಮ್ಮನ ಫೋಟೋಗೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದರು. ಇದಕ್ಕೂ ಮೊದಲು ಚನ್ನಮ್ಮನ ಸರ್ಕಲ್ ಬಳಿ ಪೂಜೆ ಸಲ್ಲಿಸಿ ತಾಲೂಕು ಆಡಳಿತ ಕಚೇರಿಗೆ ಸರ್ವ ಸಮಾಜದವರೊಂದಿಗೆ ಬರಲಾಯಿತು. ಹಿರಿಯ ವಕೀಲರಾದ ಬಿ.ಜಿ ನೆಲ್ಲಗಿ ಸ್ವಾಗತಿಸಿದರು. ಈ ವೇಳೆ ಅಶೋಕ ಅಲ್ಲಾಪೂರ, ಚಂದ್ರಶೇಖರ ದೇವರೆಡ್ಡಿ, ವಿ.ಬಿ ಕುರುಡೆ, ಆನಂದ ಶಾಬಾದಿ, ಎಸ್.ಬಿ ಪಾಟೀಲ, ಭೀಮಾಶಂಕರ ನೇರಲಗಿ, ಸುನಂದಾ ಯಂಪೂರೆ, ಪ್ರತಿಭಾ ಚಳ್ಳಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸರ್ವಸಮಾಜದ ಮುಖಂಡರು ಭಾಗವಹಿಸಿದ್ದರು.