ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chikkodi): ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ ಎಂಟನೇ ದಿನವನ್ನು ಪೂರೈಸಿದೆ. ಹೋರಾಟಕ್ಕೆ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಬೆಂಬಲ ನೀಡಿದೆ. ಈ ಮೂಲಕ ಹೋರಾಟಕ್ಕೆ ವಿವಿಧ ಸಂಘ, ಸಂಸ್ಥೆಗಳು ಬೆಂಬಲ ನೀಡುವ ಮೂಲಕ ಹೋರಾಟ ಮತ್ತಷ್ಟು ತೀವ್ರವಾಗುತ್ತಿದೆ.
ಈ ವೇಳೆ ಡಿ.ಎ.ಮಾನೆ ಅವರು ಮಾತನಾಡಿ, ಮೂರು ದಶಕಗಳ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕಿತ್ತು. ಈಗಾಗಲೇ ಚಿಕ್ಕೋಡಿಯು ಶೈಕ್ಷಣಿಕ ಜಿಲ್ಲೆಯಾಗಿ ಕಾರ್ಯ ಮಾಡುತ್ತಲಿದೆ. ಕೆಲವು ಕಛೇರಿಗಳನ್ನು ಹೊರತುಪಡಿಸಿ ಸಾಕಷ್ಟು ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಜನಪ್ರತಿನಿಧಿಗಳು ಜಿಲ್ಲೆಗಾಗಿ ಒತ್ತಡ ಹೇರಬೇಕು ಎಂದು ಹೇಳಿದರು.
ಹಿರೆಕೋಡಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಮಹಾವೀರ ಬಿಳ್ಳೂರೆ ಅವರು ಮಾತನಾಡಿ, ಬೆಳಗಾವಿ ರಾಜ್ಯದಲ್ಲಿಯೇ ಅತೀ ವಿಶಾಲವಾದ ಜಿಲ್ಲೆ ಆಗಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಆಗದೇ ಇರುವುದು ದುರದೃಷ್ಟಕರ ಸಂಗತಿ. ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರೆ ಕೈಗಾರಿಕೆ, ಉದ್ಯೋಗ, ರೈತರಿಗೆ ಮಾರುಕಟ್ಟೆ, ಶಿಕ್ಷಣ ಮುಂತಾದುವಗಳ ಸೌಲಭ್ಯ ಸಿಗಲಿವೆ. ರಾಜ್ಯ ಸರ್ಕಾರ ನುಡಿದಂತೆ ನಡೆದು ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಉಪಾಧ್ಯಕ್ಷ ಪ್ರತಾಪಗೌಡ ಪಾಟೀಲ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಭಾವಿ, ಮಹದೇವ ಬರಗಾಲೆ, ಬಿ.ಬಿ.ಬನ್ನಣ್ಣವರ, ಮೋಹನ ಪಾಟೀಲ, ತಾನಾಜಿ ಸಾನೆ, ಚಿದಾನಂದ ಶಿರೋಳ, ಭೀಮರಾವ ಮಡ್ಡಿ, ಸುರೇಶ ಕದ್ದಿ, ರಮೇಶ ಡಂಗೇರ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.




