ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನವಜಾತ ಗಂಡುಶಿಶುವನ್ನು ಅಪಹರಣ ಮಾಡಲಾಗಿತ್ತು. ಅಪಹರಣಕಾರರ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 48 ಗಂಟೆಯಲ್ಲೇ ಮೂವರು ಕಳ್ಳಿಯರನ್ನು ಬಂಧಿಸಿದ್ದಾರೆ. ಮಗುವನ್ನು ತಾಯಿಯ ಮಡಿಲಿಗೆ ಹಾಕಿದ್ದಾರೆ. ಎಂಎಸ್ ಕೆ ಮಿಲ್ ಬಡಾವಣೆಯಲ್ಲಿ ಫಾತಿಮಾ, ಹಸ್ರಿನ್ ಹಾಗೂ ಉಮೇರಾ ಎಂಬುವರನ್ನು ಬಂಧಿಸಲಾಗಿದೆ. ಬ್ರಹ್ಮಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಚಿತ್ತಾಪುರ ಮೂಲದ ಕಸ್ತೂರಿ ಎನ್ನುವ ಮಹಿಳೆ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರ್ಸ್ ವೇಷದಲ್ಲಿ ಬಂದ ಇಬ್ಬರು ಮಗುವಿಗೆ ರಕ್ತ ಪರೀಕ್ಷೆ ಮಾಡಬೇಕೆಂದು ಹೇಳಿ ತೆಗೆದುಕೊಂಡು ಹೋಗಿ ಪರಾರಿಯಾಗಿದ್ದರು. ಅಲ್ಲದೆ ಖೈರಾನ್ ಎಂಬುವರಿಗೆ ಮಗು ಮಾರಾಟ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಮಕ್ಕಳ ಕಳ್ಳಿಯರನ್ನು ಬಂಧಿಸಿದ್ದಾರೆ. ಕಲಬುರಗಿ, ವಿಜಯಪುರ ಭಾಗದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




