ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ದಸರಾ ಹಬ್ಬದ ರಜೆಯ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳಿಗೆ 15 ದಿನಗಳ ಕಾಲ ರಂಗ ತರಬೇತಿ ನೀಡಿತು. ಶಿಬಿರದ ಸಮಾರೋಪ ಕಾರ್ಯಕ್ರಮ ಅಕ್ಟೋಬರ್ 20, 2024ರ ಭಾನುವಾರ, ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ತುಂಬ ಅರ್ಥಪೂರ್ಣವಾಗಿ ನೆರವೇರಿತು. ಸಿನಿಮಾ, ಜಾನಪದ ನೃತ್ಯ, ನಾಟಕ(ಬುದ್ದ ಮತ್ತು ಕಿಸಾ ಗೌತಮಿ) ನೋಡುಗರ ಹೃನ್ಮನ ತಣಿಸಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸಿಡಿಪಿಒ ಎಸ್.ಎನ್ ಕೋರವಾರ, ರಂಗಭೂಮಿ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಮಾಧ್ಯಮರಂಗ ಫೌಂಡೇಶನ್ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಮಕ್ಕಳಿಗೆ ಬರೀ ಓದು, ಬರಿ ಎಂದು ಹೇಳುವುದು. ವೈದ್ಯರು, ಇಂಜಿನಿಯರ್ ಮಾಡುವುದಲ್ಲ. ಸಾಂಸ್ಕೃತಿಕ ಪ್ರಪಂಚದಲ್ಲಿ ಅವರನ್ನು ಬಿಡಬೇಕು. ಹೆಚ್ಚಿಗೆ ಓದದೆ ಸಿನಿಮಾ, ಕ್ರೀಡೆ, ಉದ್ಯಮದಲ್ಲಿ ಸಾಧನೆ ಮಾಡಿದವರಿದ್ದಾರೆ. ಹೀಗಾಗಿ ಮಾಧ್ಯಮರಂಗ ಫೌಂಡೇಶನ್ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸದಾ ನಮ್ಮ ಸಹಕಾರ ಇರುತ್ತೆ ಅಂತಾ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿ, ಸರ್ಕಾರಿ ಶಾಲೆ, ಅಲ್ಲಿ ಓದುವ ಮಕ್ಕಳು ಅಂದರೆ ಈ ಸಮಾಜ ನೋಡುವ ದೃಷ್ಟಿ ಬೇರೆಯಿದೆ. ಸಾಲ ಮಾಡಿಯಾದರೂ ಖಾಸಗಿ ಶಾಲೆಯಲ್ಲಿ ಓದಿಸುವ ಪೋಷಕರು ಇಂತಹ ಮಕ್ಕಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾಧ್ಯಮರಂಗ ಫೌಂಡೇಶನ್ ರಂಗ ತರಬೇತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.
ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಶೋಕ ಬಿರಾದಾರ ಸ್ವಾಗತಿಸಿದರು. ಶರಣಮ್ಮ ಬೂದಿಹಾಳ ನಿರೂಪಿಸಿ ವಂದಿಸಿದರು. ಈ ವೇಳೆ ಫೌಂಡೇಶನ್ ಸಹಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯರಾದ ರಮೇಶ ಬೂದಿಹಾಳ, ರೇಣುಕ ನವೀನ ಹಿಪ್ಪರಗಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಭರತೇಶ ಹಿರೋಳ್ಳಿ, ಮಲ್ಲಿಕಾರ್ಜುನ ಪಟ್ಟಣ ಶೆಟ್ಟಿ, ರಾಜಶೇಖರ ಶೆಟ್ಟಿ, ಲಕ್ಕಣ್ಣ ಬೀರಗೊಂಡ, ಸಂಜೀವಕುಮಾರ ಡಾಂಗಿ, ಸಿದ್ದು ಬ್ಯಾಕೋಡ, ರಾಚು ಕೊಪ್ಪ, ಸುದರ್ಶನ ಜಂಗಾಣಿ, ಇಸ್ಮಾಯಿಲ್ ಶೇಖ್, ಭೋಜರಾಜ ದೇಸಾಯಿ, ಅಸ್ಫಾಕ್ ಕರ್ಜಗಿ, ಶಾಂತವೀರ ಹಿರೇಮಠ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.