ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಇವತ್ತಿನ ದಿನದಲ್ಲಿ ಯಾರಲ್ಲೂ ತಾಳ್ಮೆ ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುವ ಹೊಂದಾಣಿಕೆಯ ಸ್ವಭಾವವೇ ಇಲ್ಲವಾಗಿದೆ. ಇಲ್ನೋಡಿ ಕುಡಿಯುವ ನೀರಿನ ವಿಚಾರಕ್ಕೆ ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. ಎಂಜಿನಿಯರಿಂಗ್ ಪದವೀಧರರ ನಡುವೆ ಭಾನುವಾರ ಮುಂಜಾನೆ 10.30ಕ್ಕೆ ಬಲಿಜ ಶ್ರೇಯಾ ಭವನದಲ್ಲಿ ಮದುವೆ ನಿಗದಿಯಾಗಿದ್ದು, ಹಿಂದಿನ ರಾತ್ರಿ ಕುಡಿಯುವ ನೀರಿನ ಸಲುವಾಗಿ ಶುರುವಾದ ಜಗಳದಿಂದ ಮುರಿದು ಬಿದ್ದಿದೆ.
ದಾವಣಗೆರೆ ಜಿಲ್ಲೆ ಜಗಳೂರಿನ ಎನ್.ಮನೋಜಕುಮಾರ್, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ಸಿ.ಎ ಅನಿತಾ ಇವರ ಮದುವೆ ಇಂದು ನಡೆಯಬೇಕಿತ್ತು. ಶನಿವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ತಡವಾಗಿ ಬಂದ ಕೆಲವರು ಊಟಕ್ಕೆ ಕುಳಿತಿದ್ದಾರೆ. ಕೇಟರಿಂಗ್ ಸಿಬ್ಬಂದಿ ಕುಡಿಯಲು ಸರಿಯಾಗಿ ನೀರಿನ ವ್ಯವಸ್ಥೆ ಮಾಡಿಲ್ಲವೆಂದು ಗಂಡು-ಹೆಣ್ಣಿನ ಕಡೆಯವರ ನಡುವೆ ಜಗಳವಾಗಿದೆ. ಅದು ಭಾನುವಾರ ಮುಂಜಾನೆಯ ತನಕ ನಡೆದಿದೆ. ಅನೇಕರು ಸಂಧಾನ ಮಾಡಿದರೂ ಸಾಧ್ಯವಾಗಿಲ್ಲ. ಕೊನೆಗೆ ಮದುವೆಯೇ ನಿಂತು ಹೋಗಿದೆ.