Ad imageAd image

ಮುಂದಿನ ವಾರದಿಂದಲೇ ಸಿಂದಗಿಗೆ ನಗರ ಬಸ್ ಸೇವೆ: ಸಚಿವ ರಾಮಲಿಂಗಾ ರೆಡ್ಡಿ

Nagesh Talawar
ಮುಂದಿನ ವಾರದಿಂದಲೇ ಸಿಂದಗಿಗೆ ನಗರ ಬಸ್ ಸೇವೆ: ಸಚಿವ ರಾಮಲಿಂಗಾ ರೆಡ್ಡಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ 9 ಸಾವಿರ ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅನುಕಂಪದ ಆಧಾರದ ಮೇಲೆ ಸಾವಿರ ಜನರಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹೇಳಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಮಂಗಳವಾರ ಸಿಂದಗಿ ಪಟ್ಟಣದಲ್ಲಿ ನಿಗಮದ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚನ್ನವೀರ ಸ್ವಾಮಿ ಬಸ್ ನಿಲ್ದಾಣ ಎಂದು ಮರುನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನೂತನವಾಗಿ ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, ಕಲ್ಯಾಣ ಕರ್ನಾಟಕ ವಿಭಾಗಕ್ಕೆ 800 ಬಸ್‌ಗಳನ್ನು ಒದಗಿಸಲಾಗಿದೆ. ಸಿಂದಗಿಯಲ್ಲಿ ಸುಸಜ್ಜಿತವಾದ ಬಸ್ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬಸ್ ನಿಲ್ದಾಣಕ್ಕೆ ಜಾಗ ನೀಡಿರುವ ಜ್ಞಾಪಕಾರ್ಥವಾಗಿ ಸ್ವಾಮೀಜಿ ಹೆಸರನ್ನು ಇಡಲಾಗಿದೆ. ಶಾಸಕರ ಮನವಿಯಂತೆ, ಸಿಂದಗಿ ನಗರ 5 ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವುದರಿಂದ ಪ್ರಯಾಣಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ  ಮುಂದಿನ ವಾರದಿಂದಲೇ ಸಿಂದಗಿ ನಗರ ಬಸ್ ಸಂಚಾರ ಕಾರ್ಯಾಚರಣೆ ಅನುಮತಿ ನೀಡಲಾಗುವುದು ಎಂದರು.

ದೇವರ ಹಿಪ್ಪರಗಿ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವ ಹೆಸರು ನಾಮಕರಣ ಮಾಡಲಾಗಿದೆ. ಸುರಪುರ ಬಸ್ ನಿಲ್ದಾಣಕ್ಕೆ, ರಾಜವೆಂಕಟಪ್ಪ ನಾಯಕ ಹೆಸರು ಇಡಲಾಗಿದೆ. ಶಹಾಪುರ ನಿಲ್ದಾಣದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ, ವಸತಿ ಗೃಹ ಉದ್ಘಾಟನೆ ಹಾಗೂ ಸಿಂದಗಿ ಬಸ್ ನಿಲ್ದಾಣದ ಮರುನಾಮಕರಣ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಕಳೆದ 2018ನೇ ಸಾಲಿನಲ್ಲಿ ನನ್ನ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರು  ಅಡಿಗಲ್ಲು ಹಾಕಿದ ವಸತಿ ಗೃಹಗಳಿಗೆ ನಾನು ಶಾಸಕನಾದ ಮೇಲೆ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ ಎಂದು ಭಾವುಕರಾಗಿ ಹೇಳಿದರು. ಈ ಕಾರ್ಯಕ್ಕಾಗಿ ಸಹಕರಿಸಿ, ಪ್ರೊತ್ಸಾಹಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡ ಇಂಡಿಯ ಒಡಲ ಧ್ವನಿ ಸದಸ್ಯರು ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಸನ್ಮಾನಿಸಿ, ಉತ್ತರ ಕರ್ನಾಟಕದ ಪ್ರಸಿದ್ಧಿ ಖಾದ್ಯವಾದ 100 ಶೇಂಗಾ ಹೋಳಿಗೆಯನ್ನು ಸಚಿವರಿಗೆ ನೀಡಿದರು. ಸಿಬಂದಿಗಳ ನೂತನ ವಸತಿ ಗೃಹಗಳ ಹಂಚಿಕೆ ಆದೇಶ ಪತ್ರ ಹಾಗೂ ಅನುಕಂಪದ ಆಧಾರದ ಮೇಲೆ ನೇಮಕಗೊಂಡವರಿಗೆ ನೇಮಕಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಸೇರಿದಂತೆ ಜಿಲ್ಲೆಯ  ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಕಲಬುರಗಿಯ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಸ್ವಾಗತಿಸಿದರು.

WhatsApp Group Join Now
Telegram Group Join Now
Share This Article