ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದ ಸ್ವಚ್ಚತೆ, ನೈರ್ಮಲ್ಯ, ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು. ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಿ ಉನ್ನತ ಶಿಕ್ಷಣ ಕೊಡಿಸುವಂತೆ ಹೇಳಿದರು. ಮಹಾನಗರ ಪಾಲಿಕೆ ಉಪಮಹಾಪೌರರಾದ ದಿನೇಶ ಹಳ್ಳಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮನೋವೈದ್ಯ ಡಾ.ಮಂಜುನಾಥ ಮಸಳಿ ಉಪನ್ಯಾಸ ನೀಡಿದರು. ಪೌರಕಾರ್ಮಿಕರಿಗಾಗಿ ಆಯೋಜಿಸಲಾದ ವಿವಿಧ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಮಹೇಜಬಿನ್ ಹೊರ್ತಿ, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಬದ್ರುದ್ದಿನ ಸೌದಾಗರ ಸೇರಿದಂತೆ ಮಹಾನಗರಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.