ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ಪೂರ್ಣಗೊಂಡ ಹಿನ್ನಲೆಯಲ್ಲಿ ಶನಿವಾರ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸಲಾಯಿತು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅರ್ಧಕ್ಕೆ ಹೊರಟು ಹೋದರು. ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಲಿಲ್ಲ. ಇದು ಭಾರೀ ಚರ್ಚೆ ಹುಟ್ಟು ಹಾಕಿತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಸರ್ಕಾರದ ವತಿಯಿಂದ ಸಮಾವೇಶ ಆಯೋಜಿಸಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಕಾರ್ಯಕ್ರಮದಲ್ಲಿ ಹಾಜರಿರುವವರಿಗೆ ಸ್ವಾಗತ ಕೋರುವುದು ಪರಿಪಾಠ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಆ ವೇಳೆಯಲ್ಲಿ ಇರದಿದ್ದ ಕಾರಣ, ಅವರ ಹೆಸರನ್ನು ನಾನು ಸಹಜವಾಗಿ ತೆಗೆದುಕೊಳ್ಳಲಿಲ್ಲ. ಇದರಲ್ಲಿ ಅವಮಾನ ಮಾಡುವ ಪ್ರಶ್ನೆ ಎಲ್ಲಿದೆ? ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹಾಗೂ ಡಿ ಕೆ ಶಿವಕುಮಾರ್ ನಡುವೆ ಒಡಕುಂಟು ಮಾಡುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ಅವರು ನೀಡುತ್ತಾರೆ. ಇದರಿಂದ ರಾಜಕೀಯ ಲಾಭವಾಗಬಹುದೆಂಬ ಭ್ರಮೆ ಬಿಜೆಪಿಯವರಿಗಿದ್ದು, ಅದು ಸದಾ ಭ್ರಮೆಯಾಗಿಯೇ ಇರಲಿದೆ.
ನಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಿಜಯನಗರದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು. ಇದು ಸರ್ಕಾರಕ್ಕೆ ಜನರ ಬೆಂಬಲವನ್ನು ಸೂಚಿಸುತ್ತದೆ. ಬಿಜೆಪಿಯವರು ಗ್ಯಾರಂಟಿ ವಿರೋಧಿಸುವ ಮಾತುಗಳನ್ನಾಡುತ್ತಲೇ, ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಅನುಕರಿಸುತ್ತಿದ್ದಾರೆ.
ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಯವರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ. ಆದರೆ ನಾವು ಚರ್ಚೆಗೆ ಸದಾ ಸಿದ್ಧರಿದ್ದೇವೆ. ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ನಿಂದ ತೆರಿಗೆ ನೋಟೀಸ್ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜಿಎಸ್‌ಟಿ ಪದ್ಧತಿ ಕೇಂದ್ರ ಸರ್ಕಾರ ಮಾಡಿದ್ದು, ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಇದಕ್ಕೆ ರಾಜ್ಯ ಸರ್ಕಾರಗಳ ಜವಾಬ್ದಾರಿಯಿಲ್ಲ. ಆದಾಗ್ಯೂ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.



 
		 
		 
		
 
  
 
 
                     
                     
                     
                    