ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹೊಸ ವರ್ಷದ ಮೊದಲ ದಿನವಾದ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ ಎಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೊಸ ವರ್ಷದ ಶುಭಾಶಯಗಳನ್ನು ಕೋರುವುದರ ಜೊತೆಗೆ ಕೆಲವೊಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದರು. ಜೀವನದಲ್ಲಿ ಏಳು ಬೀಳು ಸಹಜ. ಆತ್ಮವಿಶ್ವಾಸ ಕಳೆದುಕೊಳ್ಳದೆ, ಧೈರ್ಯದಿಂದ ಸಮಸ್ಯೆ, ಸಂದರ್ಭಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಸಂವಿಧಾನ ಜಾರಿ ವೇಳೆ ಅಂಬೇಡ್ಕರ್ ಅವರು ಹೇಳಿದ, ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎನ್ನುವ ಮಾತುಗಳನ್ನು ಉಲ್ಲೇಖಿಸಿದರು. ಈ ಕಾರಣಕ್ಕಾಗಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತಾ ಹೇಳಿದರು.
ದೇಶದ ಆರ್ಥಿಕತೆ ಕುಸಿತ ಕಂಡಿದ್ದಾಗ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು. ದೇಶದ ಆರ್ಥಿಕ ಲಾಭ ಜನರಿಗೆ ಸಿಗುವಂತೆ ಮಾಡಿದರು. ಆಹಾರ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಕಡ್ಡಾಯ ಮಾಡಿದರು. ಈ ಮೂಲಕ ದೇಶವನ್ನು ಸಮಾನತೆ ಕಡೆ ತೆಗೆದುಕೊಂಡು ಹೋಗುವಂತೆ ಮಾಡಿದರು ಎಂದು ತಿಳಿಸಿದರು.