ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡಿಸಿದರು. 1994ರಲ್ಲಿ ಜನತಾ ದಳದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದರು. ಇಂದು 16ನೇ ಬಜೆಟ್ ಮಂಡಿಸಿ ದಾಖಲೆ ಬರೆದರು. 2ನೇ ಬಾರಿಗೆ ಮುಖ್ಯಮಂತ್ರಿಯಾಗಿ 2025-26ನೇ ಸಾಲಿನಲ್ಲಿ 4 ಲಕ್ಷದ 9 ಸಾವಿರದ 549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದರು. 5 ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ರೂಪಾಯಿ ನೀಡಿದರು. ಇದಲ್ಲದೆ 10 ಹೊಸ ಯೋಜನೆಗಳನ್ನು ಘೋಷಿಸಿದರು.
ಕರ್ನಾಟಕ ದೇಶದ ಜಿಡಿಪಿಯಲ್ಲಿ ಶೇಕಡ 8.4ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣೆಯಲ್ಲಿದೆ. ದೇಶದ ಬೆಳವಣಿಗೆ ದರದಲ್ಲಿ ಶೇಕಡ 6.4ಕ್ಕಿಂತ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 8 ಸಾವಿರ ಕೋಟಿ ರೂಪಾಯಿ ಸಿಎಂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎನ್ನುವ ಹೊಸ ಯೋಜನೆ ಘೋಷಿಸಿದರು.
ಶಿಕ್ಷಣ ಇಲಾಖೆಗೆ 45,286 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ, ನೀರಾವರಿ ಇಲಾಖೆಗೆ 22,181 ಕೋಟಿ, ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 20,625 ಕೋಟಿ, ಇಂಧನ ಇಲಾಖೆಗೆ 26,896 ಕೋಟಿ, ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆಗೆ 21,405 ಕೋಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಎಸ್ಸಿ, ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ, ಕೃಷಿ, ಕಾರ್ಮಿಕ, ಆರೋಗ್ಯ, ಉದ್ಯಮ ಸೇರಿದಂತೆ ಎಲ್ಲ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಇದನ್ನು ಅಲ್ಪಸಂಖ್ಯಾತರ ಬಜೆಟ್ ಆಗಿದೆ. ಅಂಬೇಡ್ಕರ್ ಅವರ ಸಂವಿಧಾನ ವಿರೋಧಿ, ಎಸ್ಸಿ, ಎಸ್ಟಿಗಳ ವಿರೋಧಿ ಬಜೆಟ್ ಎಂದು ಆರೋಪಿಸಿದೆ.