ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru:) ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಹಿನ್ನಲೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಗೌರವ ಸಲ್ಲಿಸಿದರು. ಈ ವೇಳೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಜಾತಿಗಣತಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಅಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಹೇಳಿದರು.
ಇತ್ತೀಚೆಗೆ ಕೆಲವರು ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ತಮಗೆ ಸೇರಿದವರೆಂದು ಬಿಂಬಿಸಲು ಪ್ರಾರಂಭಿಸಿದ್ದಾರೆ. ಮಹಾತ್ಮ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ ‘ದಿ ಆರ್ಗನೈಜರ್’ ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು.
ಬಿಜೆಪಿಯವರು ಜವಾಹಾರ್ ನೆಹರೂ ಅವರನ್ನು ವಿರೋಧಿಸುತ್ತಾರೆ. ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರಿಗೆ ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್ ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದರು.