ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಬಾಗಿನ ಅರ್ಪಿಸಿದರು. ಇದಕ್ಕೂ ಮೊದಲು ಗಂಗಾ ಪೂಜೆ ಸಲ್ಲಿಸುವ ಮೂಲಕ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಸಭೆ ಕರೆದು ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗುವುದು. ರೈತರು ಯಾರೂ ಪರಿಹಾರ ಕೊಡಿ ಎಂದು ನ್ಯಾಯಾಲಯಕ್ಕೆ ಹೋಗಬಾರದು. ಇದರಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ರೈತ ಹೋರಾಟಗಾರರೊಂದಿಗೆ ಹಿಂದೆಯೇ ಬೆಳಗಾವಿಯಲ್ಲಿ ಸಭೆ ನಡೆಸಿದ್ದೆ. ಅಲ್ಲಿ ಎಲ್ಲರೂ ಒಪ್ಪಿಗೆ ಪತ್ರ ನೀಡಿ ಎಂದಿರುವ ಹಿನ್ನೆಲೆಯಲ್ಲಿ ಸರ್ಕಾರವೂ ಒಪ್ಪಿಕೊಂಡಿದೆ. ಉಪಮುಖ್ಯಮಂತ್ರಿಗಳು ಇತ್ತೀಚೆಗೆ ಈ ಭಾಗದ ರೈತರು, ಶಾಸಕರೊಂದಿಗೆ ಸಭೆ ಕರೆದು ಚರ್ಚಿಸಿದ್ದು , ಒಪ್ಪಿಗೆ ಆದೇಶ ನೀಡುವುದು ಒಂದು ಹಂತಕ್ಕೆ ಬಂದಿದೆ. ಎಲ್ಲರ ಒಪ್ಪಿಗೆಯ ಮೇಲೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವಾರದೊಳಗೆ ಈ ಬಗ್ಗೆ ಇತ್ಯರ್ಥ ಮಾಡಲಾಗುವುದು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ 519.6 ಮೀಟರ್ ದಿಂದ 524.25 ಮೀಟರ್ ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರನ್ನು ಸಂಗ್ರಹಿಸಿ, ಬಳಕೆ ಮಾಡಲು ಅನುಕೂಲವಾಗಲಿದೆ. 173 ಟಿಎಂಸಿ ನೀರನ್ನು 6.6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದಾಗಿದೆ. ಮೂರನೇ ಹಂತದ ಬಗ್ಗೆಯೂ ತೀರ್ಮಾನವಾಗಿದ್ದು, ಗೆಜೆಟ್ ಅಧಿಸೂಚನೆಯಾಗಿಲ್ಲ. ಇದಾದರೆ ನೀರಾವರಿ ಹಾಗೂ ಅಣೆಕಟ್ಟು ಎತ್ತರಿಸುವ ಕೆಲಸಗಳು ಆಗಲು ಅನುಕೂಲವಾಗಲಿದೆ. ಈ ವಿಚಾರಗಳ ಬಗ್ಗೆ ಮೂರು ಬಾರಿ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳನ್ನು ಭೇಟಿ ಮಾಡಲಾಗಿದೆ. ಉಪಮುಖ್ಯಮಂತ್ರಿ ಐದು ಬಾರಿ ಭೇಟಿಯಾಗಿದ್ದಾರೆ. ನೀರಾವರಿ ನಮ್ಮ ಆದ್ಯತಾ ವಲಯ. ರೈತರಿಗೆ ಅನುಕೂಲವಾಗಬೇಕು. ರೈತರ ಜಮೀನುಗಳಿಗೆ ನೀರು ದೊರೆತು, ರೈತರ ಉತ್ಪನ್ನಗಳು ಹೆಚ್ಚಾಗಬೇಕು ಹಾಗೂ ಅವರ ಬದುಕು ಹಸನಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವ ಗುರಿಯಿದೆ. ಹಂತಹಂತವಾಗಿ ಈ ಗುರಿಯನ್ನು ಸಾಧಿಸಲಾಗುವುದು. 2025-26ನೇ ಬಜೆಟ್ ನಲ್ಲಿ ಬಾಗಲಕೋಟೆ, ಮಂಗಳೂರು, ಕೋಲಾರ ನಂತರ ವಿಜಯಪುರದಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಯೋಜನೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಿ, ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕೆಂಬ ಸೂಚನೆ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಗಲಕೋಟೆಯ ಮಲಪ್ರಭಾ ನದಿ ಹಾಗೂ ವಿಜಯಪುರ ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹ ತಲೆದೋರಿ ರೈತರಿಗೆ ಹಾನಿಯುಂಟಾಗುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸರ್ಕಾರ ಬದ್ಧವಾಗಿದೆ. ಯುಕೆಪಿ ಹಂತ 3ಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಆದಷ್ಟು ಶೀಘ್ರ ಹೊರಡಿಸಲು ಕೇಂದ್ರದ ಮೇಲೆ ಹಲವು ಬಾರಿ ಒತ್ತಡ ಹೇರಲಾಗಿದೆ. ಅಧಿಸೂಚನೆ ಹೊರಡಿಸಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಸಚಿವ ಶಿವಾನಂದ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕಗೊಂಡ ಸೇರಿದಂತೆ ಅನೇಕರು ಉಪಸ್ಥಿತಿದ್ದರು.