ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಗೃಹ ಕಚೇರಿ ಕೃಷ್ಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಹಿರಿಯ ಸಾಹಿತಿ ನಾಡೋಜ ಡಾ.ಹಂಪನಾ ನಾಗರಾಜಯ್ಯ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಫಲಕ ಅನಾವರಣಗೊಳಿಸಿದರು. ಇದೇ ವೇಳೆ ಕುಮಾರವ್ಯಾಸ ಭಾರತ ಕೃತಿಯ ಸಂಪುಟಗಳನ್ನು ಸಿಎಂ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಈ ಯೋಜನೆಯ ಮೂಲಕ ಪ್ರಸ್ತಕ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮನೆಯಲ್ಲಿ ಪುಟ್ಟ ಗ್ರಂಥಾಲಯ ಸ್ಥಾಪಿಸುವುದು. ಪುಸ್ತಕ ಅಭಿರುಚಿಯನ್ನು ಇಂದಿನ ಪೀಳಿಗೆಯಲ್ಲಿ ಬೆಳಸುವುದಾಗಿದೆ ಎಂದರು. ಮನೆ, ಸಂಘ, ಸಂಸ್ಥೆ ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ. ಮನೆಯ ಮಾಲೀಕರು 100 ಪುಸ್ತಕಗಳೊಂದಿಗೆ ಗ್ರಂಥಾಲಯ ಸ್ಥಾಪಿಸಬೇಕು. ಗಣ್ಯರಿಂದ, ವಿದ್ವಾಂಸರಿಂದ, ಕಲಾವಿದರಿಂದ ಉದ್ಘಾಟಿಸುವ ಜವಾಬ್ದಾರಿ ಪ್ರಾಧಿಕಾರದ್ದು. ಇದರ ಪ್ರಚಾರ ಸಹ ಪ್ರಾಧಿಕಾರ ಮಾಡುತ್ತದೆ. ಇದಕ್ಕಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚಿಸಲಾಗುವುದು ಎಂದರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಇಲಾಖೆ ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಶಿ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.