ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜಯಂತಿ ಹಾಗೂ ಸ್ವಚ್ಛತಾ ಆಂದೋಲನ ಪ್ರತಿಜ್ಞಾವಿಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾತ್ಮ ಗಾಂಧಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಸಂತ. ಅವರನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ವಿಶ್ವದಲ್ಲಿ ಯಾವುದೇ ದೇಶದಲ್ಲಿ ಅಹಿಂಸೆ, ಚಳವಳಿಗಳ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮತ್ತೊಂದು ದೇಶವಿಲ್ಲವೆಂದು ಹೇಳುವುದು ಅತೀಶಯೋಕ್ತಿವಾಗಲ್ಲ ಎನ್ನುವುದು ನನ್ನ ಭಾವನೆ ಎಂದರು. ಹೀಗಾಗಿ ಗಾಂಧಿಯವರ ಸರ್ವೋದಯ ಹಾಗೂ ಅಂಬೇಡ್ಕರ್ ಅವರ ಅಂತ್ಯೋದಯ ವಿಚಾರಗಳೊಂದಿಗೆ ಆರ್ಥಿಕ ಶಕ್ತಿ ತುಂಬುವುದರ ಜೊತೆಗೆ ಸಮಸಾಮಜ ನಿರ್ಮಾಣ ಮಾಡಲಿಕ್ಕೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.
ಅಹಿಂಸೆಯ ಮಾರ್ಗದ ಮೂಲಕ ಬ್ರಿಟಿಷರು ಭಾರತ ಬಿಟ್ಟು ಹೋಗುವಂತೆ ಮಾಡಿದರು. ದೇಶಕ್ಕಾಗಿ ಜೈಲುವಾಸ ಅನುಭವಿಸಿದರು. ಅವರ ಕನಸುಗಳು ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಈಡೇರಿಸುವುದು ನಮ್ಮ ಗುರಿ. ಹೀಗಾಗಿಯೇ ಪಂಚ ಗ್ಯಾರೆಂಟಿಗಳನ್ನು ನೀಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಕೆಲಸ ಮಾಡಿದ್ದೇವೆ ಎಂದರು. ಇದೇ ವೇಳೆ ಸ್ವಚ್ಛತಾ ಆಂದೋಲನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಇಂದು ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ ಸುಮಾರ 5 ಸಾವಿರ ಜನರು ಗಾಂಧಿ ಭವನದಿಂದ ವಿಧಾನಸೌಧ, ವಿಕಾಸಸೌಧ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ತನಕ ನಡಿಗೆ ನಡೆಸಲಾಯಿತು. ಅಲ್ಲಿ ಗಾಂಧಿ ಪ್ರತಿಮೆಗೆ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು ಎಂದರು. ಪಕ್ಷಭೇದವನ್ನು ಮರೆತು, ಶಾಂತಿ, ಸಹಬಾಳ್ವೆಯನ್ನು ಒಪ್ಪಿ ಹೆಜ್ಜೆ ಹಾಕಿದ್ದೇವೆ. ಅಹಿಂಸೆಯಿಂದ ಏನು ಬೇಕಾದರೂ ಸಾಧಿಸಬಹುದು ಅನ್ನೋದು ನಮಗೆ ತೋರಿಸಿ ಕೊಟ್ಟಿದ್ದಾರೆ ಅಂತಾ ಹೇಳಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಹೆಚ್.ಕೆ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.