ಪ್ರಜಾಸ್ತ್ರ ಸುದ್ದಿ
ಸಂಡೂರು(Sandoru): ನಗರದಲ್ಲಿ ಸೋಮವಾರ ಸಾಧನಾ ಸಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದರ ಜೊತೆಗೆ 400 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಸಂಡೂರು ಜನತೆಗೆ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಜನರಿಗೆ ನೀಡಿರುವುದು ಸಂಸದ ಈ.ತುಕಾರಾಂ ಹಾಗೂ ಸಚಿವ ಸಂತೋಷ್ ಲಾಡ್ ಗೆ ಸಲ್ಲಬೇಕು ಎಂದರು.
ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಬಳ್ಳಾರಿ ಲೋಕಸಭೆಗೆ ಸ್ಪರ್ಧಿಸಿದರು. ಇವರು ಸಂಡೂರು ಜನತೆ, ಕ್ಷೇತ್ರದ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದಾರೆ. ಈ ಬಾರಿ ಶಾಸಕರಾದ ಮೇಲೆ ಅವರು 1200 ಕೋಟಿ ಅನುದಾನ ತಂದರು. ಇಂತಹ ನಾಯಕ ನಿಮಗೆ ಬೇರೆ ಎಲ್ಲೂ ಸಿಗುವುದಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಬಿಜೆಪಿಯನ್ನು ಸೋಲಿಸಿ ಎಂದರು. 56 ಲಕ್ಷ ಕೋಟಿ ವೆಚ್ಚದಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿಯವರು ಸರ್ಕಾರದ ಬಳಿ ಹಣವಿಲ್ಲವೆಂದು ಸುಳ್ಳು ಹೇಳುತ್ತಾರೆ ಅಂತಾ ಕಿಡಿ ಕಾರಿದರು.