ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಕರ್ನಾಟಕದ ಇಬ್ಬರು ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಇಂದು ಗೌರವ ನಮನ ಸಲ್ಲಿಸಿದರು. ಇಲ್ಲಿನ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಾಹೇಶ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದ್ದು. ನಮ್ಮ ರಾಜ್ಯದ ಯೋಧರ ಹುತಾತ್ಮರಾಗಿದ್ದು ನೋವಿನ ಸಂಗತಿ. ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬಸ್ಥರಿಗೆ ಸರ್ಕಾರದಿಂದ ಸಲ್ಲಬೇಕಾದ ಸಕಲ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿದಂತೆ ಸೇನಾಧಿಕಾರಿಗಳು ಉಪಸ್ಥಿತರಿದ್ದರು.