ಪ್ರಜಾಸ್ತ್ರ ಸುದ್ದಿ
ಸಂಡೂರು(Sandoru): ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲುವು ಸಾಧಿಸಿದ್ದರ ಹಿನ್ನಲೆಯಲ್ಲಿ ಭಾನುವಾರ ಮತದಾರರಿಗೆ ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಲವು ನಾಯಕರು ಭಾಗವಹಿಸಿದ್ದರು. ನೂತನ ಶಾಸಕಿ ಅನ್ನಪೂರ್ಣ ತುಕಾರಂ, ಪತಿ, ಸಂಸದೆ ಈ ತುಕಾರಂ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಮೋದಿ ಅಚ್ಚೆ ದಿನ್ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ವಿದೇಶದಿಂದ ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ 15 ಲಕ್ಷ ಹಾಕಲಿಲ್ಲ. ಬರೀ ಭಾಷಣದಲ್ಲೇ ಮೋದಿಯವರು ಎಲ್ಲಾ ಮುಗಿಸಿ ಹೋದರು. 2014-2018 ರಲ್ಲಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ನೋಡಿ. ಮೋದಿಯವರು ನಿಮಗೆ ಈ ಮಟ್ಟದ ಮೋಸ ಮಾಡಿದ್ದಾರಲ್ಲಾ ಇದನ್ನು ಪ್ರಶ್ನಿಸಬೇಕಿದೆ.
ಮೂರು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸು, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.