ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನ ಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಮತಗಳ್ಳತನವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ವಿಚಾರವಾಗಿ ಆಗಸ್ಟ್ 5ರಂದು ಬೆಂಗಳೂರಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, ಮತಗಳ್ಳತನ ಆಗಿರುವ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿ ಇದೆ ಎಂದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಮಾತನಾಡಿ, ನಾವು ಕರ್ನಾಟಕದಲ್ಲಿ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದೆವು. ಆ ಕ್ಷೇತ್ರದ ಮತದಾರರ ಡಿಜಿಟಲ್ ಪಟ್ಟಿಯನ್ನು ತೆಗೆದುಕೊಂಡು ವಿಶ್ಲೇಷಣೆ ನಡೆಸಲಾಯಿತು. ಇದಕ್ಕೆ 6 ತಿಂಗಳು ತೆಗೆದುಕೊಂಡಿದೆ. ಮತದಾರರ ಪಟ್ಟಿಯಲ್ಲಿ ಅವರು ಹೇಗೆ ಅಕ್ರಮ ಎಸಗುತ್ತಾರೆ. ಹೊಸ ಮತದಾರರನ್ನು ಹೇಗೆ ಸೇರ್ಪಡೆ ಮಾಡುತ್ತಾರೆ. ಎಲ್ಲಿಂದ ಕರೆ ತರುತ್ತಾರೆ ಅನ್ನೋದು ಸೇರಿದಂತೆ ಅವರ ಮತ ಕಳ್ಳತನದ ಪೂರ್ತಿ ಕಾರ್ಯ ಶೈಲಿಯನ್ನು ತಿಳಿದುಕೊಂಡಿದ್ದೇವೆ ಎಂದು ಹೇಳಿದ್ದರು.