ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೇಂದ್ರದ 2025-26ನೇ ಸಾಲಿನ ಬಜೆಟ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರಲ್ಲಿ ಒಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ಬಾಯಿ ಬಿಟ್ಟಿಲ್ಲ. ಮನುಸ್ಮೃತಿ ವಿರೋಧಿಸಿ ಸಂವಿಧಾನ ಪರವಾಗಿರುವ ರಾಜ್ಯಗಳ ವಿರುದ್ಧ ಬಿಜೆಪಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.
ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಬಜೆಟ್ ನಲ್ಲಿ ಎಂಎಸ್ ಪಿ ಬಗ್ಗೆ ಉಸಿರೇ ಬಿಟ್ಟಿಲ್ಲ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂಪಾಯಿ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ನಮ್ಮಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟ ಜನರು. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇಕಡ 6.64 ಆಗುತ್ತದೆ. ಇದು ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನರವಾಗಬಹುದು. ದಿನದ ಆದಾಯ 100, 150 ಹೊಂದಿರುವ ಶೇಕಡ 70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 11 ಬಜೆಟ್ ಗಳನ್ನು ನೋಡುತ್ತಾ ಬಂದ ನಮಗೆ 12ನೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆಗಾಗ ಅವರೇ ಹೇಳುತ್ತಿರುವ ವಿಕಸಿತ ಭಾರತದ ಬಜೆಟ್ ಅಲ್ಲ. ಅವನತ ಭಾರತದ ಬಜೆಟ್. ಅಭಿವೃದ್ಧಿಯತ್ತ ಸಾಗುತ್ತಿದ್ದ ಭಾರತವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆಯುತ್ತಿದೆ. ಇವರು ಒಕ್ಕೂಟ ವ್ಯವಸ್ಥೆಯ ಭಾರತ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವಿವರವಾದ ಬೇಡಿಕೆಯ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದೆ. ಬಹುಷಃ ಆ ಬೇಡಿಕೆಯ ಪಟ್ಟಿಯನ್ನು ಅವರು ಕಣ್ಣೆತ್ತಿ ಕೂಡ ನೋಡಿದ ಹಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಆಶೀರ್ವಾದ ನಿಮಗೆ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕರ್ನಾಟಕದ ಸ್ವಾಭಿಮಾನಿ ಜನತೆ ಆ ಬೆದರಿಕಗೆ ಜಗ್ಗದೆ ಬಿಜೆಪಿಯನ್ನು ಸೋಲಿಸಿದ್ದರು. ಅದರಂತೆ ನರೇಂದ್ರ ಮೋದಿಯವರು ಕರ್ನಾಟಕದ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.