ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ತುಂಗಭದ್ರ ಜಲಾಶಯದ 19ನೇ ಗೇಟ್ ಚೈನ್ ತುಂಡಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗೆ ಸೇರಿದಂತೆ ತಜ್ಞರೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕೈದು ದಿನಗಳಲ್ಲಿ ಗೇಟ್ ದುರಸ್ತಿ ಕಾರ್ಯ ಮುಗಿಯಲಿದೆ. ಹಿಂದೂಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ನಿರ್ಮಾಣದ ಹೊಣೆ ನೀಡಲಾಗಿದೆ. ಕನ್ಹಯ್ಯ ನಾಯ್ಡು ಅವರ ಸಲಹೆಯಂತೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
1948ರಲ್ಲಿ ಡ್ಯಾಂ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು, 1954ರಲ್ಲಿ ನಾಲೆಗಳಿಗೆ ನೀರು ಬಿಡುವ ಕಾರ್ಯ ಮಾಡಲಾಯಿತು. ಸುಮಾರು 70 ವರ್ಷಗಳಷ್ಟು ಹಳೆಯದಾದ ಡ್ಯಾಂನಲ್ಲಿ ಇದುವರೆಗೂ ಯಾವುದೇ ಗೇಟ್ ನ ಚೈನ್ ತುಂಡಾಗಿರಲಿಲ್ಲ. ಜಲಾಶಯದಲ್ಲಿ ಈ ವರ್ಷ 115 ಟಿಎಂಸಿ ನೀರಿದ್ದು ಈಗಾಗ್ಲೇ 25 ಟಿಎಂಸಿ ನೀರು ರೈತರ ಜಮೀನಿಗೆ ಬಿಡಲಾಗಿದೆ. 19ನೇ ಗೇಟ್ ತುಂಡಾಗಿರುವುದರಿಂದಾಗಿ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ನೀರು ಬಿಡದೆ ದುರಸ್ತಿ ಕಾರ್ಯ ಸಾಧ್ಯವಿಲ್ಲ. ನಂತರ 64 ಟಿಎಂಸಿ ನೀರು ಉಳಿಯುತ್ತೆ. ಆಗಸ್ಟ್ 17ರಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನೀರಿಕ್ಷೆಯಿದೆ ಎಂದರು.
ಕೇಂದ್ರ ಸರ್ಕಾರ ನೇಮಿಸಿರುವ ತುಂಗಭದ್ರ ಮಂಡಳಿ ಅಸ್ತಿತ್ವದಲ್ಲಿದೆ. ಕೇಂದ್ರ ಜಲ ಆಯೋಗ, ಕರ್ನಾಟಕ, ಆಂಧ್ರ, ತೆಲಂಗಾಣದ ಸದಸ್ಯರು ಇದರಲ್ಲಿದ್ದಾರೆ. ತಜ್ಞರ ಸಲಹೆಯಂತೆ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣ ಏನು ಎಂಬುವುದರ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಡ್ಯಾಂ ಮತ್ತೆ ತುಂಬಲಿದೆ. ಬಾಗಿನ ಅರ್ಪಿಸಲು ನಾನೇ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.