ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಕ್ಫ್ ಆಸ್ತಿ ಕಬಳಿಕ ಬಗ್ಗೆ ಮೌನವಾಗಿರಲು ಬಿ.ವೈ ವಿಜಯೇಮದ್ರ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ(Anwar Manippady) ಅವರಿಗೆ 150 ಕೋಟಿ ರೂಪಾಯಿಯ ಆಮಿಷವೊಡ್ಡಿದ್ದರು ಎನ್ನುವುದು ಬಹಿರಂಗವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಅವಧಿಯಲ್ಲಿ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಈ ಬಗ್ಗೆ ಪ್ರಧಾನಿ ಮೋದಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದ್ದು, ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು. ಅಲ್ಲದೇ ಇದಕ್ಕಾಗಿ 150 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ ಅಂತಾ ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ನಾ ಖಾವೂಂಗಾ, ನಾ ಖಾನೆ ದೂಂಗಾ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ನರೇಂದ್ರ ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ?
ವಕ್ಪ್ ಆಸ್ತಿ ವಿಚಾರದಲ್ಲಿ ವಿಜಯೇಂದ್ರ ಅವರು ವಹಿಸುತ್ತಿರುವ ಆಸಕ್ತಿಯನ್ನ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಪ್ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಷಾಮೀಲಾಗಿರುವಂತೆ ಕಾಣುತ್ತಿದೆ. ಪಕ್ಷದ ಮಹಾಮಹಿಮರೆಲ್ಲರೂ ಷಾಮೀಲಾಗಿರುವ ಸಂಶಯ ಇದೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟೀಸ್ ನೀಡಿರುವುದನ್ನು ಈಗಾಗಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಇಂತಹ ಗಂಭೀರ ಆರೋಪ ಹೊತ್ತುಕೊಂಡಿರುವ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ. ಇನ್ನೊಂದೆಡೆ ಪಕ್ಷದ ಹೈಕಮಾಂಡ್ ಗೆ 2 ಸಾವಿರ ಕೋಟಿ ರೂಪಾಯಿ ಸಂದಾಯ ಮಾಡಿ ತಮ್ಮ ತಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.