ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘವು 50 ವರ್ಷಗಳ ಮೈಲಿಗಲ್ಲನ್ನು ಸಾಧಿಸಿದ್ದು, ಇದಕ್ಕಾಗಿ ಶ್ರಮಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು. ನಿಮ್ಮೆಲ್ಲರ ಸಹಕಾರದಿಂದ ನಾನು ಆರ್ಥಿಕ ಇಲಾಖೆಯ ಜವಾಬ್ದಾರಿಯನ್ನು ದೀರ್ಘ ಕಾಲದವರೆಗೆ ನಿಭಾಯಿಸಲು ಸಾಧ್ಯವಾಯಿತು. ನಾನು ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆಯ ಕಾರ್ಯಭಾರವನ್ನು ನಿರ್ವಹಿಸಿದ್ದೇನೆ. ಈಗ ಸರ್ಕಾರದ ಯಶಸ್ವಿ ಆಡಳಿತಕ್ಕೆ ಎರಡು ವರ್ಷ ಪೂರೈಸಿದ್ದು, ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
ತೆರಿಗೆ ಸಂಗ್ರಹಣೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದಕ್ಕಾಗಿ ಎಲ್ಲ ಅಧಿಕಾರಿಗಳಿಗೆ ಅಭಿನಂದನೆಗಳು. ಜವಾಬ್ದಾರಿಯುತ ಅಧಿಕಾರಿಗಳಿಂದ ಉತ್ತಮ ತೆರಿಗೆ ಸಂಗ್ರಹಣೆಯಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಹೆಚ್ಚಿನ ಮೊತ್ತದ ತೆರಿಗೆ ಸಂಗ್ರಹಣೆ ಸಾಧ್ಯವಾಗುತ್ತದೆ. ಕಳೆದ ವರ್ಷ ತೆರಿಗೆ ಸಂಗ್ರಹಣೆಗೆ 1,03,000 ಕೋಟಿಗಳ ಗುರಿ ನಿಗದಿಪಡಿಸಲಾಗಿದ್ದು, ಹೆಚ್ಚುವರಿ 17,000 ಕೋಟಿಗಳ ತೆರಿಗೆ ಸಂಗ್ರಹಣೆಯನ್ನು ಸಾಧಿಸಲಾಗಿತ್ತು. ಈ ವರ್ಷ ತೆರಿಗೆ ಸಂಗ್ರಹಣೆಗೆ 1,20,000 ಕೋಟಿಗಳ ಗುರಿಯನ್ನು ನೀಡಲಾಗಿದ್ದು, ಅಧಿಕಾರಿಗಳು ಗುರಿಮೀರಿ ಸಾಧನೆ ಮಾಡಬೇಕಿದೆ.
ಈ ವರ್ಷ 4,09,000 ಕೋಟಿ ರೂ. ಗಳ ಬಜೆಟ್ ಮಂಡಿಸಲಾಗಿದ್ದು, ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ 50,018 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈವರೆಗೆ 90,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಗ್ಯಾರಂಟಿಗಳಿಗೆ ಹಣ ಪೂರೈಸಲಾಗದೇ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದವರು ಟೀಕಿಸಿದ್ದರು. ಆದರೆ ನಾವು ಈ ಸವಾಲನ್ನು ಯಶಸ್ವಿಯಾಗಿ ಗೆದ್ದಿದ್ದೇವೆ. ಸರ್ಕಾರದ ಈ ಯಶಸ್ಸಿನ ಹಿಂದೆ ಇಲಾಖೆಯ ಅಧಿಕಾರಿಗಳ ಶ್ರಮ ಅಡಗಿದೆ. ಅಲ್ಲದೇ ಕರ್ತವ್ಯಲೋಪ ಎಸಗುವ ಅಧಿಕಾರಿ, ನೌಕರರ ಮೇಲೆ ಶಿಸ್ತಿನ ಕ್ರಮವನ್ನೂ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.