ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶ್ರೀಮಂತರು, ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲ. ಆದರೆ, ಬಡವರಿಗೆ ಬಿಪಿಎಲ್ ಕಾರ್ಡ್ ಬಿಟ್ಟು ಹೋಗಬಾರದು. ಅವರಿಗೆ ಎಪಿಎಲ್(APL) ಇದೆ. ಅದಕ್ಕೂ ಸೌಲಭ್ಯಗಳು ಸಿಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾರಣದಿಂದ ಅರ್ಹರು ಬಿಪಿಎಲ್(BPL) ಕಾರ್ಡ್ ನಿಂದ ವಂಚಿತರಾಗಬಾರದು. ಇದರಲ್ಲಿ ಒಂದೆರಡು ಅನರ್ಹರಿದ್ದರೂ ಪರವಾಗಿಲ್ಲ, ಆದರೆ, ಅರ್ಹರಿಗೆ ಅನ್ಯಾಯವಾಗಬಾರದು. ಬಿಪಿಎಲ್ ನವರು ಇದ್ದರೆ ಈಗಲೂ ಅರ್ಜಿ ಹಾಕಿ. ಅವರಿಗೆ ನಾವು ಕಾರ್ಡ್ ಕೊಡುತ್ತೇವೆ. ನಾವು ಬಿಜೆಪಿಯವರಿಂದ ಈ ವಿಚಾರದಲ್ಲಿ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಉಳುವವನೆ ಭೂಮಿ ಒಡೆಯ ಕಾನೂನು ತಂದವರು ಇಂದಿರಾ ಗಾಂಧಿಯವರು. ಇದನ್ನು ಬದಲಾವಣೆ ಮಾಡುವ ಧೈರ್ಯ ಯಾರಿಗೂ ಇಲ್ಲ. ಇಂದಿರಾ ಗಾಂಧಿಯವರ ಬಗ್ಗೆ ಪುಸ್ತಕ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದು, ಅದರ ಕಾಪಿ ರೈಟ್ಸ್ ರಾಹುಲ್ ಗಾಂಧಿಯವರ ಬಳಿಯಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡುತ್ತೇನೆ ಅಂತಾ ತಿಳಿಸಿದರು.
ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸೇರಿ ಇತರರು ಮಾತನಾಡಿದರು. ಈ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪರಿಷತ್ ಸದಸ್ಯ ಸಲೀಂ ಅಹ್ಮದ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಇಂದಿರಾ ಗಾಂಧಿ ಸ್ಮಾರಕ ಗೌರವ ಪ್ರಶಸ್ತಿ ನೀಡಲಾಯಿತು.