ಪ್ರಜಾಸ್ತ್ರ ಸುದ್ದಿ
ಸಂಡೂರು(Sandoru): ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ಅನ್ನಪೂರ್ಣಮ್ಮ ಗೆಲವುದೂ ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಂಡೂರು ವಿಧಾನಸಭೆಯ ಉಪ ಚುನಾವಣೆಯ ಪ್ರಚಾರದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದರು. ಅನ್ನಪೂರ್ಣಮ್ಮ-ತುಕಾರಮ್ ಜೋಡೆತ್ತು ರೀತಿಯಲ್ಲಿ ಸಂಡೂರು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ಅವರಿಗೆ ನೀಡುವ ಮತ ನನಗೆ ನೀಡಿದಂತೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ. ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಿಬಿಡಲಿ ಎಂದು ಬಿಜೆಪಿಯವರು ಕಾಯುತ್ತಿದ್ದಾರೆ. ನಮ್ಮ ಸರ್ಕಾರ ಇರುವ ತನಕ ಗ್ಯಾರೆಂಟಿಗಳು ನಿಲ್ಲುವುದಿಲ್ಲ. ಇದಕ್ಕೆ ನಾನು ಗ್ಯಾರೆಂಟಿ. ಬಡವರು ಹೊಟ್ಟೆ ತುಂಬ ಊಟ ಮಾಡುವುದು ಬಿಜೆಪಿ ಸಹಿಸಲ್ಲ. ಸಾಮಾಜಿಕ ನ್ಯಾಯ, ಮೀಸಲಾತಿ ಪರವಾಗಿಲ್ಲ. ಎಸ್ ಸಿಎಸ್ ಪಿ-ಟಿಎಸ್ ಪಿ ಕಾಯ್ದೆ ಜಾರಿಗೆ ಮಾಡಿರುವುದು ನಮ್ಮ ಸರ್ಕಾರ. ಕೇಂದ್ರ ಹಾಗೂ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಯಾಕೆ ಆಗಿಲ್ಲ ಎಂದು ಕೇಳಿದರು.
ಇಡೀ ಜಿಲ್ಲೆಯ ಗಣಿ ಲೂಟಿ ಮಾಡಿದ ರೆಡ್ಡಿ ನನಗೆ ಸವಾಲು ಹಾಕಿದರು. ನಾನು ಸವಾಲು ಸ್ವೀಕರಿಸಿ ಪಾದಯಾತ್ರೆ ಮಾಡಿದೆ ಮೇಲೆ ರೆಡ್ಡಿ ಅವನತಿ ಶುರುವಾಯಿತು. ಈಗ ಬಿಜೆಪಿ ರೆಡ್ಡಿಗೆ ಸಂಡೂರು ಜವಾಬ್ದಾರಿ ನೀಡಿದೆ. ರೆಡ್ಡಿ, ಶ್ರೀರಾಮುಲು ಸೇರಿ ಬಳ್ಳಾರಿ ಜಿಲ್ಲೆ ಹಾಳು ಮಾಡುತ್ತಾರೆ. ಅವರ ಮಾತುಗಳನ್ನು ನಂಬಬೇಡಿ. ನಾ ಖಾವೂಂಗಾ ನಾ ಖಾನೆ ದೂಂಗಾ ಎನ್ನುವ ಮೋದಿಯವರೆ ರೆಡ್ಡಿಯವರನ್ನು ಬಿಜೆಪಿ ಸೇರಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.