Ad imageAd image

ಶಾಲೆಯ ಕುಡಿಯುವ ನೀರಿಗೆ ವಿಷ, ಮೂವರ ಬಂಧನ: ಸಿಎಂ ಆಕ್ರೋಶ

Nagesh Talawar
ಶಾಲೆಯ ಕುಡಿಯುವ ನೀರಿಗೆ ವಿಷ, ಮೂವರ ಬಂಧನ: ಸಿಎಂ ಆಕ್ರೋಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಂರಾಗಿದ್ದು, ಅವರನ್ನು ವರ್ಗಾವಣೆ ಮಾಡುವ ದೃಷ್ಟಿಯಿಂದ, ಕುಡಿಯುವ ನೀರಿಗೆ ವಿಷ ಬೆರೆಸಿದ ಹೀನಕೃತ್ಯ 15 ದಿನಗಳ ಹಿಂದೆ ನಡೆದಿತ್ತು. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಸಾಗರ ಪಾಟೀಲ, ಕೃಷ್ಣ ಮಾದರ, ನಾಗನಗೌಡ ಪಾಟೀಲ ಎನ್ನುವ ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಾಮ ಸೇನೆ, ಬಿಜೆಪಿಯ ನಾಯಕರನ್ನು ಪ್ರಶ್ನಿಸಿದ್ದಾರೆ.

ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಪುಟ್ಟಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಈ ಘಟನೆಯೇ ಸಾಕ್ಷಿ. “ದಯೆಯೇ ಧರ್ಮದ ಮೂಲವಯ್ಯ” ಎಂದು ಸಾರಿದ ಶರಣರ ನಾಡಿನಲ್ಲಿ ಈ ಮಟ್ಟಿನ ಕೌರ್ಯ, ದ್ವೇಷ ಹುಟ್ಟಲು ಸಾಧ್ಯವೇ? ಎಂಬುದನ್ನು ಈ ಕ್ಷಣಕ್ಕೂ ನನ್ನಿಂದ ನಂಬಲಾಗುತ್ತಿಲ್ಲ.

ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಒಮ್ಮೆ ತಮ್ಮ‌ ಆತ್ಮವಿಮರ್ಷೆ ಮಾಡಿಕೊಳ್ಳಲಿ. ಈ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್ ಹೊರುವರೇ? ವಿಜಯೇಂದ್ರ ಹೊರುವರೇ? ಆರ್.ಅಶೋಕ್ ಹೊರುವರೇ? ಇಂಥವರು ಮಾಡುವ ಸಮಾಜಘಾತುಕ ಕೃತ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ನಾಯಕರು ಈಗ ಮುಂದೆ ಬಂದು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.

ಎಲ್ಲ ಬಗೆಯ ಮತೀಯವಾದ, ಮೂಲಭೂತವಾದಿತನಗಳು ಮನುಷ್ಯ ಸಮಾಜಕ್ಕೆ ಅಪಾಯಕಾರಿ. ದ್ವೇಷ ಭಾಷಣಗಳು, ಕೋಮು ಗಲಭೆಗಳ ತಡೆಗಾಗಿಯೇ ನಾವು ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ, ಅಂಥವರ ವಿರುದ್ಧ ಕಾನೂನಿನ ಪರಿಧಿಯೊಳಗೆ ಸಾಧ್ಯವಾದ ಎಲ್ಲಾ ಕ್ರಮವನ್ನು ವಹಿಸುತ್ತಿದ್ದೇವೆ. ನಮ್ಮ ಎಲ್ಲಾ ಪ್ರಯತ್ನಗಳು ಫಲ ಕೊಡಬೇಕಾದರೆ ಸಾರ್ವಜನಿಕರೂ ಇಂಥಾ ಶಕ್ತಿಗಳ ವಿರುದ್ಧ ಧ್ವನಿಯೆತ್ತಬೇಕು, ಪ್ರತಿರೋಧ ಒಡ್ಡಬೇಕು, ದೂರು ದಾಖಲಿಸಬೇಕು.

WhatsApp Group Join Now
Telegram Group Join Now
Share This Article