ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕ ಕಾರಣ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿ ಹಾಗೂ ಪೋಷಕರು ಟಿಸಿ ಕೇಳಿದರೆ ಹಣ ಕೊಡಬೇಕು ಎಂದು ಹೇಳಿ, ತಾಳಿ, ಕಿವಿ ಓಲೆ ಪಡೆದ ಘಟನೆ ನಡೆದಿದೆ. ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರಮನ್ ಡಾ.ಸಿ.ಬಿ ಚಿನಿವಾಲ ಈ ರೀತಿ ನಡೆದುಕೊಂಡಿದ್ದಾರೆ ತಿಳಿದು ಬಂದಿದೆ. ಕನಕಗಿರಿ ತಾಲೂಕಿನ ಮಸ್ಲಾಪುರ ಗ್ರಾಮದ ಕಾವೇರಿ ವಾಲೀಕಾರ ಅನ್ನೋ ವಿದ್ಯಾರ್ಥಿನಿಯ ಟಿಸಿ ಕೊಡಲು ತಾಳಿ, ಕಿವಿ ಓಲೆ ಪಡೆದಿದ್ದಾರೆ.
ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಕಾವೇರಿ ಪ್ರವೇಶ ಪಡೆದಿದ್ದಳು. ಆಗ 10 ಸಾವಿರ ರೂಪಾಯಿ ಕೊಟ್ಟಿದ್ದಳು. ಉಳಿದ 90 ಸಾವಿರ ರೂಪಾಯಿ ಕೊಡಬೇಕಿತ್ತು. ಇದರ ನಡುವೆ ಕಾವೇರಿಗೆ ಗದಗಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಹೀಗಾಗಿ ಟಿಸಿ ಕೇಳಿದ್ದಾರೆ. ಬಡತನದ ಕುಟುಂಬಕ್ಕೆ ಒಮ್ಮೆ 90 ಸಾವಿರ ರೂಪಾಯಿ ಕಟ್ಟಬೇಕು ಎಂದಿದ್ದಾರೆ. ಸಧ್ಯ ಅಷ್ಟೊಂದು ಹಣವಿಲ್ಲ ಎಂದಾಗಿ ವಿದ್ಯಾರ್ಥಿನಿಯ ತಾಯಿಯ ತಾಳಿ, ಕಿವಿ ಓಲೆ ಪಡೆದುಕೊಂಡು ಟಿಸಿ ಕೊಟ್ಟಿದ್ದಾರಂತೆ. ಇದು ತಿಳಿದ ಬಳಿಕ ಆಕ್ರೋಶ ವ್ಯಕ್ತವಾಗಿದೆ.
ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಡೆದಿದ್ದ ತಾಳಿ, ಕಿವಿ ಓಲೆ ವಾಪಸ್ ಕೊಟ್ಟು ಕ್ಷಮೆ ಕೇಳಿದ್ದಾರೆ. ವಿದ್ಯಾರ್ಥಿನಿ ತಾಯಿ ರೇಣುಕಮ್ಮಾ, ಮಗಳು ಜೀವಕ್ಕೆ ಏನಾದರೂ ಮಾಡಿಕೊಂಡರೆ ಹೇಗೆ ಎಂದು ಬಂಗಾರ ಕೊಟ್ಟೆ. ಬಂಗಾರ ಮತ್ತೆ ಸಿಗುತ್ತೆ. ಮಗಳು ಸಿಗುತ್ತಾಳ. ಅದಕ್ಕೆ ಕೊಟ್ಟೆ. ಈಗ ವಾಪಸ್ ತಂದು ಕೊಟ್ಟಿದ್ದಾರೆ ಎಂದು ನೋವು ಹಂಚಿಕೊಂಡಿದ್ದಾರೆ.