ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿ, ಜೆಡಿಎಸ್ ಮೈತ್ರಿ ಪಡೆಗೆ ಹೀನಾಯ ಸೋಲಾಗಿದೆ. ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಚನ್ನಪಟ್ಟಣದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದರು. ಇದರೊಂದಿಗೆ ನಿಖಿಲ್ ಗೆ ಮೂರನೇ ಬಾರಿಗೆ ಸೋಲು ಆಗುವ ಮೂಲಕ ತೀವ್ರ ನಿರಾಸೆ ಮೂಡಿಸಿದೆ.
ಮಂಡ್ಯ ಲೋಕಸಭಾ, ರಾಮನಗರ ವಿಧಾನಸಭಾ ಇದೀಗ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸೋಲು ಅನುಭವಿಸಿದ್ದಾರೆ. ರಾಮನಗರದಲ್ಲಿ ನಿಖಿಲ್ ತಾಯಿ ಶಾಸಕಿಯಾಗಿದ್ದರು. ಅವರ ನಂತರ ಪುತ್ರನಿಗೆ ಟಿಕೆಟ್ ನೀಡಿದರು. ಚನ್ನಪಟ್ಟಣದಲ್ಲಿ ತಂದೆ ಶಾಸಕರಾಗಿದ್ದರು. ನಂತರ ನಿಖಿಲ್ ಗೆ ಇಲ್ಲೂ ಟಿಕೆಟ್ ನೀಡಿದರೂ ಗೆಲುವು ದಕ್ಕಲಿಲ್ಲ. ಇದರಿಂದಾಗಿ ಹ್ಯಾಟ್ರಿಕ್ ಸೋಲಿನ ಹೊಡೆತ ಬಿದ್ದಿದೆ.
ಇನ್ನು ಹಾವೇರಿಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿಜಯ ಸಾಧಿಸುವ ಮೂಲಕ ಕಳೆದ ಸುಮಾರು 20 ವರ್ಷಗಳ ಬಳಿಕ ಕೈ ಪಡೆಗೆ ಗೆಲುವು ಆಗಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಮಗ ಭರತ್ ಬೊಮ್ಮಾಯಿಗೂ ಸೋಲಾಗಿದೆ. ಹೀಗಾಗಿ ಬಿಜೆಪಿಗೆ ಬಾರೀ ಪೆಟ್ಟಾಗಿದೆ. ಇನ್ನು ಬಳ್ಳಾರಿಯ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಅವರು ಬಿಜೆಪಿಯ ಬಂಗಾರು ಹಣಮಂತು ವಿರುದ್ಧ ವಿಜಯ ಸಾಧಿಸಿದ್ದಾರೆ.