ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಸಂಬಂಧ ಶನಿವಾರ ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಅನಿವಾರ್ಯವಾಗಿ ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಪರಿಸ್ಥಿತಿಗೆ ಕಾಂಗ್ರೆಸ್ ನವರು ದೂಡಿದ್ದಾರೆ. ಅಧಿಕಾರ ಹಾಗೂ ಹಣ ಬಲದಿಂದ ಈಗಾಗ್ಲೇ ಚುನಾವಣೆ ಗೆದಿದ್ದೇವೆ ಎನ್ನುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು. ಮೊನ್ನೆ ರಾತ್ರಿಯವರೆಗೂ ನಿಖಿಲ್ ಸ್ಪರ್ಧೆ ಮಾಡುವ ಆಸೆ ಇರಲಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ರಾತ್ರಿಯೆ ಹಳ್ಳಿ ಹಳ್ಳಿಗೆ ಭೇಟಿ ನೀಡಿದರು. ನಿನ್ನ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡಿದರು. ಆದರೆ, ಕಾಂಗ್ರೆಸ್ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದರು.
ಶುಕ್ರವಾರ ನಾಮಪತ್ರ ಸಲ್ಲಿಕೆ ವೇಳೆ ಬಂದ ಗಾಡಿಗಳಿಗೆ ನೋಟಿಸ್ ನೀಡಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಕೊಟ್ಟಿದ್ದಾರೆ. ಸಿಎಂ, ಡಿಸಿಎಂ ಚನ್ನಪಟ್ಟಣಕ್ಕೆ ಹೋದಾಗ ಗಾಡಿಗಳ ವ್ಯವಸ್ಥೆ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲದೆ ಸಿ.ಪಿ ಯೋಗೇಶ್ವರ್ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ. ನಾವು ಮೂರು ಕ್ಷೇತ್ರದಲ್ಲಿ ಈಗಾಗ್ಲೇ ಗೆದ್ದಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಅಭಿವೃದ್ಧಿ ಕೆಲಸ ನೋಡಿ ಜನ ಆಶೀರ್ವಾದ ಮಾಡುತ್ತಾರೆ ಅಂತಾ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.