ಪ್ರಜಾಸ್ತ್ರ ಸುದ್ದಿ
ದಕ್ಷಿಣ ಕನ್ನಡ(Dakshina Kannada): ನಿರಂತರ ಮಳೆಯಿಂದಾಗಿ ಗುಡ್ಡ ಕುಸಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ಮೂರು ಅಮಾಯಕ ಜೀವಗಳು ಬಲಿಯಾಗಿವೆ. ಮೊಂಟೆಪದವು ಪಂಬದ ಹಿತ್ತಲು ಕೋಡಿ ಕೊಪ್ಪಲ ಎಂಬಲ್ಲಿ ಈ ಘಟನೆ ನಡೆದಿದೆ. ಎನ್ ಡಿಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಮಣ್ಣಿನಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಆದರೆ, ಇಬ್ಬರು ಮಕ್ಕಳು, ಅಜ್ಜಿ ಮೃತಪಟ್ಟಿದ್ದಾರೆ.
ಕಾಂತಪ್ಪ ಪೂಜಾರಿ ಎನ್ನುವ ಮನೆಯ ಮೇಲೆ ಗುಡ್ಡ ಕುಸಿದಿದೆ. ಇವರ ಕಾಲು ಮುರಿದಿದೆ. ಇವರ ಪತ್ನಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್, ಆರುಷ್ ಮೃತಪಟ್ಟಿದ್ದಾರೆ. ಮಗ ಸೀತಾರಾಮ್, ಇವರ ಪತ್ನಿ ಅಶ್ವಿನಿಯನ್ನು ರಕ್ಷಿಸಲಾಗಿದೆ. ಗುಡ್ಡ ಕುಸಿದ ಜಾಗ ದುರ್ಗಮವಾಗಿದ್ದರಿಂದ ರಕ್ಷಣೆಗೆ ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಶುಕ್ರವಾರ ಮಧ್ಯಾಹ್ನದ ತನಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮುಂಜಾನೆ ಸುಮಾರು 4 ಗಂಟೆಗೆ ಗುಡ್ಡ ಕುಸಿದಿದೆ. ಇದರಿಂದಾಗಿ ಮನೆ ಸಂಪೂರ್ಣ ಬಿದ್ದಿದೆ. ಸ್ಥಳೀಯರು ಓಡಿ ಬಂದಿದ್ದಾರೆ. ಆದರೆ, ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿತ್ತು. ಒಳಗಿನಿಂದ ಅಳು, ಆಕ್ರಂದನ ಮಾತ್ರ ಕೇಳಿಸುತ್ತಿತ್ತು. ತಾಯಿ ಅಶ್ವಿನಿ ನನ್ನನ್ನು ಬಿಡಿ ಮೊದಲು ಮಕ್ಕಳನ್ನು ರಕ್ಷಿಸಿ ಎಂದು ಕೇಳುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ. ದುರಂತವೆಂದರೆ ಪುಟ್ಟ ಎರಡು ಮಕ್ಕಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಇನ್ನೂ ಮಳೆ ಮುಂದುರೆದಿದೆ.