ಪ್ರಜಾಸ್ತ್ರ ಸುದ್ದಿ
ಸಿಡ್ನಿ(Sidni): ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗದ ಕಳಪೆ ಆಟ ಮುಂದುವರೆದಿದೆ. ಇಂದು ಕೊನೆಯ ಟೆಸ್ಟ್ ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದ ನಾಯಕ ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಸ್ಕಾಟ್ ಹಾಗೂ ಸ್ಟಾರ್ಕ್ ಬೌಲಿಂಗ್ ದಾಳಿಗೆ 185 ರನ್ ಗಳಿಗೆ ಆಲೌಟ್ ಆಗಿದ್ದಾರೆ. ಘಟಾನುಘಟಿ ಬ್ಯಾಟ್ಸಮನ್ ಗಳು ಸಹ ಪೆವಿಲಿಯನ್ ಪರೇಡ್ ನಡೆಸಿದರು.
ರಿಷಬ್ ಪಂತ್ 40, ಜಡೇಜಾ 26, ಬೂಮ್ರಾ 22 ರನ್ ಬಿಟ್ಟರೆ ಉಳಿದವರು ಆಡಲೇ ಇಲ್ಲ. ವಿರಾಟ್ ಕೊಹ್ಲಿ 17, ಕೆ.ಎಲ್ ರಾಹುಲ್ 4 ರನ್ ಗಳಿಸುವ ಮೂಲಕ ವೈಫಲ್ಯ ಮುಂದುವರೆಯಿತು. ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದಿರುವ ಗಿಲ್ ಸಹ 20 ರನ್ ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಶೂನ್ಯಕ್ಕೆ ಔಟ್ ಆದ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಿಲ್ಲ.
ಇನ್ನು ಆಸ್ಟ್ರೇಲಿಯಾ ಪರ ಸ್ಕಾಟ್ ಬೊಂಲ್ಡ್ 4, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆಯುವ ಮೂಲಕ ಭಾರತದ ಆಟಗಾರರನ್ನು ಕಾಡಿದರು. ನಾಯಕ ಪ್ಯಾಟ್ ಕಮಿನ್ಸ್ 2 ಹಾಗೂ ನಾಥನ್ ಲೆಯಾನ್ 1 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 3 ಓವರ್ ಗಳಲ್ಲಿ 9 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾ ನಾಯಕ ಬೂಮ್ರಾ ಉಸ್ಮಾನ್ ಖವಾಜ್ ವಿಕೆಟ್ ಪಡೆದಿದ್ದಾರೆ.