ಪ್ರಜಾಸ್ತ್ರ ಸುದ್ದಿ
ಬದೌನ್(ಉತ್ತರ ಪ್ರದೇಶ)(Budaun): ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಹರೀಶ್ ಶಕ್ಯ, ಇವರ ಸಹೋದರ, ಸೋದರಳಿಯ ಸೇರಿದಂತೆ 16 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ನಿರ್ದೇಶನ ನೀಡಿದೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರು 10 ದಿನದೊಳಗೆ ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸಲು ನಿರ್ದೇಶನ ನೀಡಿದ್ದಾರೆ.
ಘಟನೆ ಹಿನ್ನಲೆ ಏನು?: ಬುದ್ಧಬಾಯ್ ಗ್ರಾಮದಲ್ಲಿ ದೂರುದಾರರ ತಂದೆ ಖರೀದಿಸಿದ್ದ ಭೂಮಿಯನ್ನು ಶಾಸಕ ಹರೀಶ್ ಶಕ್ಯ ಖರೀದಿ ಮಾಡಲು ಮುಂದಾಗಿದ್ದಾರೆ. 16.5 ಕೋಟಿಗೆ ಖರೀದಿ ಒಪ್ಪಂದವಾಗಿದೆ. ಮೊದಲ ಶೇಕಡ 40ರಷ್ಟು ಹಣ ಕೊಡುವುದು. ಉಳಿದ ಹಣ ದಾಖಲೆ ಹಸ್ತಾಂತರ ಸಂದರ್ಭದಲ್ಲಿ ನೀಡುವ ಕುರಿತು ಮಾತುಕತೆಯಾಗಿ 1 ಲಕ್ಷ ರೂಪಾಯಿ ಮುಂಗಡ ಕೊಟ್ಟಿದ್ದಾರೆ. ಆದರೆ, ಕೆಲ ದಿನಗಳ ಬಳಿಕ ಶೇಕಡ 40ರಷ್ಟು ಹಣ ಕೊಡದೆ ಲಿಖಿತ ಒಪ್ಪಂದ ಮಾಡಿಕೊಳ್ಳಲು ಶಾಸಕರು ಒತ್ತಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಿಲ್ಡರ್ ವೊಬ್ಬರಿಗೆ ಭೂಮಿ ಮಾರಾಟ ಮಾಡಲು ಹೋದಾಗ ಶಾಸಕರ ಕಡೆಯವರು ಕರೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಪೊಲೀಸರು ಮೂರು ದಿನ ಕಸ್ಟಡಿಯಲ್ಲಿಟ್ಟು ಹಿಂಸೆ ಕೊಟ್ಟಿದ್ದಾರೆ. ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗ ಶಾಸಕ ಸೇರಿ 16 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದೆ.