ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗುತ್ತಿದೆ. ಬಿಜೆಪಿಯಿಂದ ಟಿಕೆಟ್ ಸಿಕ್ಕೇ ಸಿಗುತ್ತೆ ಎನ್ನುವ ಆಸೆ ಹೊಂದಿದ್ದ ಸಿ.ಪಿ ಯೋಗೇಶ್ವರಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ದಾರಂತೆ. ಹೀಗಾಗಿ ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಪಿವೈ ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗುವ ಮೊದಲು ಮರಳಿ ಪಕ್ಷಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿಗಳು ವೈಯನಾಡಿಗೆ ಹೋಗಿದ್ದಾರೆ. ನಾನು ಹೋಗಬೇಕಿತ್ತು. ಪಕ್ಷ ಸೇರ್ಪಡೆ ಕಾರಣಕ್ಕೆ ಉಳಿದೆ. ನಮ್ಮ ಪಕ್ಷದ ವರಿಷ್ಠರ ಅನುಮತಿ ಪಡೆದಿದ್ದು, ಸಿಎಂ ಸಿದ್ದರಾಮಯ್ಯನವರ ಜೊತೆಗೆ ಚರ್ಚಿಸಿ ಸಿ.ಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ಪ್ರಮುಖ ನಾಯಕರಿದ್ದು ಅವರೊಂದಿಗೂ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ಕಾಂಗ್ರೆಸ್ಸಿನಿಂದಲೇ ರಾಜಕಾರಣ ಶುರು ಮಾಡಿದ್ದು, ಈಗ ವಾಪಸ್ ಆಗಿದ್ದಾರೆ ಎಂದರು.
ಈ ವೇಳೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಶಿವರಾಜ್ ತಂಗಡಗಿ, ಕೃಷ್ಣಬೈರೇಗೌಡ, ಮಾಜಿ ಸಂಸದ ಡಿ.ಕೆ ಸುರೇಶ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.